Friday, 13th December 2024

Imad Wasim: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಮಾದ್‌ ವಸೀಮ್‌ ವಿದಾಯ!

Pakistan all-rounder Imad Wasim retires from international cricket

ನವದೆಹಲಿ: ಪಾಕಿಸ್ತಾನ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಇಮಾದ್‌ ವಸೀಮ್‌ (Imad Wasim) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿಯೇ ಇಮಾದ್‌ ವಸೀಮ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಆದರೆ, 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸಲುವಾಗಿ ಅವರುನಿವೃತ್ತಿಯಿಂದ ಹೊರ ಬಂದಿದ್ದರು. ಇದೀಗ ಅವರು ತಮ್ಮ 35ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ಪೂರ್ಣ ವಿರಾಮ ಇಟ್ಟಿದ್ದಾರೆ.

ಟಿ20 ವಿಶ್ವಕಪ್‌ ಬಳಿಕ ಅವರನ್ನು ಪಿಸಿಬಿ ಆಯ್ಕೆಗಾರರು ನಿರಂತರವಾಗಿ ಕಡೆಗಣಿಸಿದ್ದರಿಂದ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಇಮಾದ್ ವಸೀಮ್‌ ಅವರು ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್ ತೊರೆಯಲು ನಿರ್ಧರಿಸಿದ್ದಾರೆ. ಇಮಾದ್ ವಸೀಮ್‌ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನದ ಪರವಾಗಿ ಐರ್ಲೆಂಡ್ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ್ದರು. ಆದರೆ ಇದಾದ ಬಳಿಕ ಅವರಿಗೆ ಅವಕಾಶ ಸಿಗಲಿಲ್ಲ. ಆದರೆ, ಅವರು ಟಿ20 ಫ್ರಾಂಚೈಸಿ ಲೀಗ್‌ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.

ಇಮಾದ್‌ ವಸೀಮ್‌ ಹೇಳಿದ್ದೇನು?

“ಸಾಕಷ್ಟು ಚಿಂತನೆಯ ನಂತರ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿದೆ ಮತ್ತು ಹಸಿರು ಜೆರ್ಸಿಯನ್ನು ಧರಿಸಿದ ಪ್ರತಿ ಕ್ಷಣವೂ ಅವಿಸ್ಮರಣೀಯವಾಗಿದೆ,” ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಇಮಾದ್‌ ವಸೀಮ್‌ ಬರೆದುಕೊಂಡಿದ್ದಾರೆ.

“ನಿಮ್ಮ ಅಚಲ ಬೆಂಬಲ, ಪ್ರೀತಿ ಮತ್ತು ಉತ್ಸಾಹ ಯಾವಾಗಲೂ ನನ್ನ ದೊಡ್ಡ ಶಕ್ತಿಯಾಗಿದೆ. ನನ್ನ ವೃತ್ತಿ ಜೀವನದ ಏರಿಳಿತಗಳಲ್ಲಿ ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹವು ನಮ್ಮ ಪ್ರೀತಿಯ ದೇಶಕ್ಕಾಗಿ ನನ್ನ ಅತ್ಯುತ್ತಮವಾದುದನ್ನು ನೀಡಲು ನನ್ನನ್ನು ಪ್ರೇರೇಪಿಸಿದೆ. ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನ ಅಂತ್ಯವಾಗಿದೆ. ಇನ್ನು ಮುಂದೆ ದೇಶಿ ಕ್ರಿಕೆಟ್‌ ಹಾಗೂ ಫ್ರಾಂಚೈಸಿ ಕ್ರಿಕೆಟ್‌ಲನಲ್ಲಿ ಮುಂದುವರಿಯುತ್ತೇನೆ ಹಾಗೂ ನಿಮ್ಮೆಲ್ಲರಿಗೂ ಹೊಸ ಹಾದಿಯಲ್ಲಿ ಮನರಂಜಿಸುತ್ತೇನೆಂಬ ವಿಶ್ವಾಸವಿದೆ. ಎಲ್ಲರಿಗೂ ಧನ್ಯವಾದ,” ಎಂದು ಪಾಕ್‌ ಆಲ್‌ರೌಂಡರ್‌ ತಿಳಿಸಿದ್ದಾರೆ.

ಇಮಾದ್ ವಸೀಮ್ 2015ರಲ್ಲಿ ಪಾಕಿಸ್ತಾನದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಶೀಘ್ರದಲ್ಲೇ ಅವರು ತಮ್ಮ ಆಲ್‌ರೌಂಡರ್ ಸಾಮರ್ಥ್ಯದಿಂದ ಪಾಕಿಸ್ತಾನ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದರು. ಒಂದು ಸಮಯದಲ್ಲಿ ಅವರು ಪಾಕಿಸ್ತಾನ ತಂಡದ ನಾಯಕನ ರೇಸ್‌ನಲ್ಲಿದ್ದರು. ಆದರೆ ಪಾಕಿಸ್ತಾನ ತಂಡದಲ್ಲಿ ನಿರಂತರ ಗುಂಪುಗಾರಿಕೆಯಿಂದಾಗಿ ಅವರನ್ನು ತಂಡದಿಂದ ತೆಗೆದುಹಾಕಲಾಗಿತ್ತು.

ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದ ಬಗ್ಗೆ ಹೇಳುವುದಾದರೆ ಇಮಾದ್ ವಸೀಮ್‌ ಪಾಕಿಸ್ತಾನ ತಂಡದ ಪರ 55 ಏಕದಿನ ಪಂದ್ಯಗಳು ಮತ್ತು 75 ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ಇಮಾದ್ ವಸೀಮ್‌ ಪಾಕಿಸ್ತಾನದ ಪರ ಏಕದಿನ ಕ್ರಿಕೆಟ್‌ನಲ್ಲಿ 5 ಅರ್ಧ ಶತಕಗಳನ್ನು ಒಳಗೊಂಡಂತೆ 986 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ 44 ಒಡಿಐ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದಲ್ಲದೇ ಟಿ20ಐ ಕ್ರಿಕೆಟ್‌ನಲ್ಲಿ 554 ರನ್ ಗಳಿಸುವುದರೊಂದಿಗೆ ಇಮಾಮ್‌ ವಸೀಮ್‌ ಬೌಲಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿ 73 ವಿಕೆಟ್ ಪಡೆದಿದ್ದಾರೆ.

ಈ ಸುದ್ದಿಯನ್ನು ಓದಿ: Champions Trophy:’ಪಾಕಿಸ್ತಾನಕ್ಕೆ ಹೋಗಲು ಭಾರತ ನಿರಾಕರಣೆ’-ಪಾಕ್‌ ಮಾಜಿ ಕ್ರಿಕೆಟಿಗರ ಆಕ್ರೋಶ!