Wednesday, 18th September 2024

ಇಂದು ಪಾಕಿಸ್ತಾನಕ್ಕೆ ಬಾಂಗ್ಲಾದೇಶ ಎದುರಾಳಿ

ಕೋಲ್ಕತ್ತಾ: ಬಾಂಗ್ಲಾದೇಶ ಪಾಕಿಸ್ತಾನವನ್ನು ಕೋಲ್ಕತ್ತಾದ ಈಡನ್ ಗಾರ್ಡನ್‌ ಮೈದಾನದಲ್ಲಿ ಎದುರಿಸಲಿದೆ.

ಸದ್ಯ ಪಾಕಿಸ್ತಾನ ತಾನಾಡಿದ 6 ಪಂದ್ಯಗಳಲ್ಲಿ 2 ರಲ್ಲಿ ಗೆಲುವು ಕಂಡಿದೆ. 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ರೋಚಕ ಪಂದ್ಯದಲ್ಲಿ 1 ವಿಕೆಟ್‌ನಿಂದ ಸೋಲನುಭವಿಸಬೇಕಾಯಿತು. ಪಾಕಿಸ್ತಾನವು ದಕ್ಷಿಣ ಆಫ್ರಿಕಾಕ್ಕೆ 270 ರನ್‌ಗಳ ಗುರಿಯನ್ನು ನೀಡಿತು. ಕೊನೆಯವರೆಗೂ ಹೋರಾಟ ನಡೆಸಿದಾಗ್ಯೂ ತಂಡ ಗೆಲುವಿನ ದಡ ಮುಟ್ಟಲಿಲ್ಲ. ಇದರಿಂದ ಸೆಮೀಸ್​ ಬಾಗಿಲು ಮುಚ್ಚುವ ಹಂತಕ್ಕೆ ಬಂದಿದೆ. ಈ ಪಂದ್ಯವನ್ನು ಗೆದ್ದಲ್ಲಿ 6 ಅಂಕಗಳೊಂದಿಗೆ ಆಫ್ಘನ್​ ಕೆಳಗೆ ತಳ್ಳಿ 5ನೇ ಸ್ಥಾನಕ್ಕೆ ಬರಲಿದೆ.

ಬಾಂಗ್ಲಾ ಹುಲಿಗಳಿಗೆ ಈ ಪಂದ್ಯ ಔಪಚಾರಿಕ ಎಂಬಂತಾಗಿದೆ. ತಂಡ ಆಡಿರುವ 6 ಪಂದ್ಯಗಳಲ್ಲಿ 5 ಸೋತು 1 ರಲ್ಲಿ ಗೆಲುವು ಸಾಧಿಸಿದೆ. ಇದರಿಂದ ಉಳಿದ ಮೂರು ಪಂದ್ಯಗಳಲ್ಲಿ ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಕಳೆದ ಶನಿವಾರ ಇದೇ ಮೈದಾನದಲ್ಲಿ ನೆದರ್ಲೆಂಡ್ಸ್ ವಿರುದ್ಧ 87 ರನ್‌ಗಳ ಆಘಾತಕಾರಿ ಸೋಲನ್ನು ಎದುರಿಸಬೇಕಾಯಿತು. 229 ರನ್‌ಗಳ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ಟೈಗರ್ಸ್ ಡಚ್ಚರ ಬೌಲಿಂಗ್​ ದಾಳಿಗೆ ಸಿಲುಕಿ 42.2 ಓವರ್‌ಗಳಲ್ಲಿ 142 ರನ್‌ಗಳಿಗೆ ಆಲೌಟ್ ಆಗಿತ್ತು.

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಈವರೆಗೂ 38 ಏಕದಿನ ಪಂದ್ಯಗಳಲ್ಲಿ ಎದುರಾಗಿವೆ. ಇದರಲ್ಲಿ ಪಾಕಿಸ್ತಾನ 33 ಪಂದ್ಯಗಳನ್ನು ಗೆದ್ದಿದ್ದರೆ, ಬಾಂಗ್ಲಾದೇಶ 5 ರಲ್ಲಿ ಜಯಿಸಿದೆ. ಬಾಂಗ್ಲಾ ಮೇಲೆ ಪೂರ್ಣ ಪ್ರಾಬಲ್ಯ ಮೆರೆದಿರುವ ಪಾಕ್​ ಈ ಪಂದ್ಯದಲ್ಲಿ ಗೆದ್ದು ಸೆಮೀಸ್​ ರೇಸ್​ನಲ್ಲಿ ಉಳಿದುಕೊಳ್ಳಲು ಪ್ಲಾನ್​ ಮಾಡಿದೆ.

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನ ಬ್ಯಾಟಿಂಗ್​ ಸ್ನೇಹಿಯಾಗಿದೆ. ಸ್ಪಿನ್ನರ್‌ಗಳಿಗೂ ಇದು ನೆರವಾಗಲಿದ್ದು, ಸ್ವಲ್ಪ ತಿರುವು ನೀಡಲಿದೆ. ಕ್ರೀಡಾಂ ಗಣದ ಬೌಂಡರಿಗಳು ಚಿಕ್ಕದಾಗಿದ್ದು, ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಸಲು ಸುಲಭವಾಗಲಿದೆ.

ತಂಡ

ಪಾಕಿಸ್ತಾನ- ಅಬ್ದುಲ್ಲಾ ಶಫೀಕ್, ಇಮಾಮ್ ಉಲ್ ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಶಾದಾಬ್ ಖಾನ್, ಇಫ್ತಿಕಾರ್ ಅಹ್ಮದ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಂ ಜೂನಿಯರ್, ಹ್ಯಾರಿಸ್ ರೌಫ್.

ಬಾಂಗ್ಲಾದೇಶ- ತಂಝೀದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹುಸೇನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫೀಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಮೆಹದಿ ಹಸನ್ ಮಿರಾಜ್, ಮೆಹದಿ ಹಸನ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ.

Leave a Reply

Your email address will not be published. Required fields are marked *