ಕರಾಚಿ: ಪಾಕಿಸ್ತಾನದ ಕ್ರಿಕೆಟ್ ಆಟಗಾರ್ತಿ, ಮಾಜಿ ನಾಯಕಿ ಬಿಸ್ಮಾ ಮರೂಫ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುರುವಾರ ನಿವೃತ್ತಿ ಘೋಷಿಸಿದ್ದಾರೆ.
32 ವರ್ಷದ ಬಿಸ್ಮಾ ಫಿಟ್ನೆಸ್ ಕಾರಣದಿಂದ, ನಂತರ 2021ರ ಆಗಸ್ಟ್‌ನಲ್ಲಿ ಹೆಣ್ಣುಮಗುವಿಗೆ ಜನ್ಮವಿತ್ತ ನಂತರ ಕ್ರಿಕೆಟ್‌ನಿಂದ ದೀರ್ಘಕಾಲ ದೂರವಿದ್ದರು.
ನ್ಯೂಜಿಲೆಂಡ್‌ನಲ್ಲಿ ನಡೆದ 2022ರ ವಿಶ್ವಕಪ್ ಸಮಯದಲ್ಲಿ ಅವರು ತಮ್ಮ ಮಗುವನ್ನು ಜೊತೆಗೆ ಒಯ್ದಿದ್ದು ಸುದ್ದಿಯಾಗಿತ್ತು.
ಎಡಗೈ ಬ್ಯಾಟರ್ ಮತ್ತು ಲೆಗ್ ಸ್ಪಿನ್ನರ್ ಆಗಿರುವ ಬಿಸ್ಮಾ 2006ರಲ್ಲಿ ಭಾರತ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 276 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 33 ಅರ್ಧಶತಕಗಳು ಸೇರಿದಂತೆ 6,262 ರನ್‌ಗಳನ್ನು ಗಳಿಸಿದ್ದಾರೆ. 80 ವಿಕೆಟ್‌ಗಳನ್ನೂ ಪಡೆದಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಎರಡು ಸಲ (2010 ಮತ್ತು 2014ರಲ್ಲಿ) ಚಿನ್ನ ಗೆದ್ದ ಪಾಕ್ ತಂಡದಲ್ಲಿ ಅವರು ಆಡಿದ್ದರು. ವಿವಿಧ ಮಾದರಿಯ 96 ಪಂದ್ಯಗಳಲ್ಲಿ ನಾಯಕಿ ಆಗಿದ್ದಾರೆ.