Friday, 13th December 2024

ಶತಕ ವಂಚಿತ ಪಂ‌ತ್‌, ಭಾರೀ ಹಿನ್ನಡೆಯಲ್ಲಿ ಕೊಹ್ಲಿ ಪಡೆ

ಚೆನ್ನೈ: ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ 578 ರನ್‌ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಆರಂಭಿಕ ಕುಸಿತಕ್ಕೊಳ ಗಾಗಿರುವ ಟೀಮ್ ಇಂಡಿಯಾಗೆ ಚೇತೇಶ್ವರ ಪೂಜಾರ ಹಾಗೂ ರಿಷಭ್ ಪಂತ್ ಆಸರೆಯಾದರು.

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತ ವಿಕೆಟ್‌ ಕೀಪರ್‌ ರಿಷಬ್‌ ಪಂತ್‌ 91 ಮೊತ್ತದಲ್ಲಿ ಔಟಾದರು. ಪೂಜಾ(73) ಹಾಗೂ ಪಂತ್(91) ತಲಾ ಅರ್ಧಶತಕ ಬಾರಿಸಿ ಪೆವಿಲಿಯನ್‌ ಸೇರಿಕೊಂಡರು.

ಇತ್ತೀಚಿನ ವರದಿ ಪ್ರಕಾರ, ಭಾರತ ಆರು ವಿಕೆಟ್‌ ನಷ್ಟಕ್ಕೆ 233 ರನ್‌ ಗಳಿಸಿ ಆಡುತ್ತಿತ್ತು. ಆಲ್ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಹಾಗೂ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಆಟ ಮುಂದುವರಿಸಿದ್ದಾರೆ.

ಭಾರತದ ಆರಂಭ ಉತ್ತಮವಾಗಿರಲಿಲ್ಲ. ಇಂಗ್ಲೆಂಡ್‌ನ ಇನ್ ಫಾರ್ಮ್ ವೇಗದ ಬೌಲರ್ ಜೋಫ್ರಾ ಆರ್ಚರ್ ಭಾರತ ತಂಡವು 44 ರನ್ ಪೇರಿಸುವಷ್ಟರಲ್ಲಿ ಡಬಲ್ ಆಘಾತ ನೀಡಿದರು.

ಅನುಭವಿ ರೋಹಿತ್ ಶರ್ಮಾ (6) ಬೇಗನೇ ನಿರ್ಗಮಿಸಿದರೆ ಯುವ ಶುಭಮನ್ ಗಿಲ್ (29) ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲಾಗದೇ ನಿರಾಸೆ ಅನುಭವಿಸಿದರು. ಊಟದ ವಿರಾಮದ ಬಳಿಕವೂ ಪರಿಸ್ಥಿತಿ ಬದಲಾಗಲಿಲ್ಲ. ನಾಯಕ ವಿರಾಟ್ ಕೊಹ್ಲಿ (11) ಹಾಗೂ ಉಪನಾಯಕ ಅಜಿಂಕ್ಯ ರಹಾನೆ (1) ಅವರನ್ನು ಡಾಮಿನಿಕ್ ಬೆಸ್ ಹೊರದಬ್ಬಿದರು. ಇದರೊಂದಿಗೆ 73 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಚೇತೇಶ್ವರ ಪೂಜಾರ ಹಾಗೂ ರಿಷಭ್ ಪಂತ್ ತಂಡಕ್ಕೆ ಆಸರೆಯಾದರು. ಈ ಪೈಕಿ ಏಕದಿನ ಶೈಲಿಯಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಪಂತ್ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು.