Wednesday, 11th December 2024

Paris Paralympics: ಫೈನಲ್‌ ಪ್ರವೇಶಿಸಿದ ಸಿಮ್ರನ್‌ ಶರ್ಮಾ

Paris Paralympics

ಪ್ಯಾರಿಸ್‌: ಪ್ಯಾರಾಲಿಂಪಿಕ್ಸ್‌ನ(Paris Paralympics) ಮಹಿಳೆಯರ 100 ಮೀ. ಓಟದ ಟಿ12 ವಿಭಾಗದಲ್ಲಿ(Women’s 100m -T12) ಭಾರತದ ಸಿಮ್ರನ್‌ ಶರ್ಮಾ(Simran Sharma) ಫೈನಲ್‌ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಪದಕ ಭರವಸೆ ಮೂಡಿಸಿದ್ದಾರೆ. ಗುರುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿಈ ಋತುವಿನಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನ ತೋರಿದ ಸಿಮ್ರನ್‌ 12.33 ಸೆಕೆಂಡ್‌ಗಳಲ್ಲಿ ಓಟ ಪೂರ್ತಿಗೊಳಿಸಿ ದ್ವಿತೀಯ ಸ್ಥಾನಿಯಾಗಿ ಫೈನಲ್‌ ಪ್ರವೇಶಿಸಿದರು.

24 ವರ್ಷದ ಹಾಲಿ ವಿಶ್ವ ಚಾಂಪಿಯನ್‌ ಸಿಮ್ರನ್‌ ಹೀಟ್ಸ್‌ನಲ್ಲಿ 12.17 ಸೆಕೆಂಡ್‌ಗಳಲ್ಲಿ ಓಟ ಪೂರ್ತಿಗೊಳಿಸಿ ಸೆಮಿಫೈನಲ್‌ ತಲುಪಿದ್ದರು. ಹುಟ್ಟಿದಾಗಿನಿಂದಲೇ ದೃಷ್ಟಿ ದೋಷ ಎದುರಿಸುತ್ತಿರುವ ಸಿಮ್ರನ್‌ ಇಂದು ರಾತ್ರಿ ನಡೆಯುವ ಫೈನಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಸಿಮ್ರಾನ್‌ಗೆ ಅಭಯ್‌ ಸಿಂಗ್‌ ಗೈಡ್‌ ಆಗಿದ್ದಾರೆ. ಸಿಮ್ರಾನ್ 2022ರಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಮತ್ತು ಇಂಡಿಯನ್ ಓಪನ್‌ನಲ್ಲಿ 100 ಮೀ ಮತ್ತು 200 ಮೀ ಎರಡರಲ್ಲೂ ಗೆದ್ದಿದ್ದರು.

ಕಳೆದ ವರ್ಷ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅವರು ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ಕಳೆದ 2021 ರಲ್ಲಿ ಟೋಕಿಯೊ ಪ್ಯಾರಾ ಗೇಮ್ಸ್‌ನಲ್ಲಿಸಿಮ್ರಾನ್‌ 12.69 ರ ಸಮಯದೊಂದಿಗೆ 100ಮೀ- T13 ನಲ್ಲಿ 11 ನೇ ಸ್ಥಾನ ಪಡೆದಿದ್ದರು. ಈ ಬಾರಿ ಚೊಚ್ಚಲ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಸದ್ಯ ಭಾರತ 24 ಪದಕ ಗೆದ್ದು 13ನೇ ಸ್ಥಾನಿಯಾಗಿದೆ. 5 ಚಿನ್ನ, 9 ಬೆಳ್ಳಿ, 10 ಕಂಚು ಒಳಗೊಂಡಿದೆ. ಭಾರತದ ಕಪಿಲ್ ಪರ್ಮಾರ್ ಪುರುಷರ ಜೂಡೊ 60 ಕೆಜಿ ಜೆ1 ಸೆಮಿಫೈನಲ್‌ನಲ್ಲಿ ಇರಾನ್‌ನ ಸೆಯದ್ ಅಬಾದಿ ವಿರುದ್ಧ 10-0 ಅಂತರದಿಂದ ಸೋತರು. ಕಪಿಲ್ ಇನ್ನು ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.

ಇದನ್ನೂ ಓದಿ Harvinder Singh: ಆರ್ಚರಿಯಲ್ಲಿ ಐತಿಹಾಸಿಕ ಪದಕ ಗೆದ್ದ ಹರ್ವಿಂದರ್ ಪಿಎಚ್‌.ಡಿ ಪದವೀಧರ

ಬುಧವಾರ ತಡರಾತ್ರಿ ನಡೆದಿದ್ದ ಪುರುಷರ ಕ್ಲಬ್ ಥ್ರೋ F51 ಸ್ಪರ್ಧೆಯಲ್ಲಿ ಭಾರತದ ಧರಂಬೀರ್(Dharambir ) ಚಿನ್ನದ ಪದಕವನ್ನು ಗೆದ್ದರೆ, ಮತೋರ್ವ ಭಾರತೀಯ ಪ್ರಣವ್ ಸೂರ್ಮಾ(Pranav Soorma ) ಬೆಳ್ಳಿ ಪದಕ ಗೆದ್ದರು. ಕ್ಲಬ್ ಥ್ರೋ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ ಇದಾಗಿದೆ. ಇದಕ್ಕೂ ಮುನ್ನ ನಡೆದ ಪುರುಷರ ವೈಯಕ್ತಿಕ ರಿಕರ್ವ್ ಆರ್ಚರಿ ಫೈನಲ್‌ ಪಂದ್ಯದಲ್ಲಿ ಭಾರತದ ಹರ್ವಿಂದರ್ ಸಿಂಗ್(Harvinder Singh) ಭರ್ಜರಿ ಪ್ರದರ್ಶನದೊಂದಿಗೆ ಚಿನ್ನ ಗೆದ್ದರು.

ಧರಂಬೀರ್ 34.92 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಏಷ್ಯನ್ ದಾಖಲೆಯನ್ನು ಮುರಿದು ಅಗ್ರಸ್ಥಾನದೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದರು. ಧರ್ಮಬೀರ್ ಮೊದಲ 4 ಯತ್ನಗಳನ್ನು ಫೌಲ್ ಮಾಡಿದರೂ, 5ನೇ ಯತ್ನದಲ್ಲಿ 34.92 ಮೀ. ದೂರಕ್ಕೆ ಎಸೆದು ಮೊದಲ ಸ್ಥಾನ ಪಡೆದರು. ಪ್ರಣವ್ ಸೂರ್ಮಾ 34.59 ಮೀಟರ್‌ ದೂರ ಕ್ರಮಿಸಿ ಬೆಳ್ಳಿ ಪದಕ ಪಡೆದರು. ಇದೇ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಭಾರತ ಅಮಿತ್‌ ಕುಮಾರ್‌ 10ನೇ ಸ್ಥಾನ ಪಡೆದರು. ಸೆರ್ಬಿಯಾದ ಜೆಲ್ಕೊ ಡಿಮಿಟ್ರಿಜೆವಿಕ್ ಅವರು 34.18 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಕಂಚಿನ ಪದಕ ಪಡೆದರು.