Friday, 13th December 2024

ಕಳಪೆ ಆರಂಭಕ್ಕೆ ಬೆಲೆ ತೆತ್ತ ಕೋಲ್ಕತಾ, ಗೆದ್ದ ಚೆನ್ನೈ

ಕಮ್ಮಿನ್ಸ್, ರಸೆಲ್ ಆಟ ವ್ಯರ್ಥ

ಮುಂಬೈ: ಚೆನ್ನೈಸೂಪರ್ ಕಿಂಗ್ಸ್ ತಂಡ ಬುಧವಾರ ನಡೆದ ಐಪಿಎಲ್ ನ 15ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 18 ರನ್ ಗಳ ರೋಚಕ ಜಯ ಸಾಧಿಸಿದೆ.

ಚೆನ್ನೈ ತಂಡದ ಪರ ಆರಂಭಿಕ ಡು ಪ್ಲೆಸಿಸ್(95) ಹಾಗೂ ಋತುರಾಜ್ ಗಾಯಕ್ವಾಡ್(64) ಅರ್ಧಶತಕಗಳ ಕೊಡುಗೆಯ ನೆರವಿ ನಿಂದ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತು. ಗುರಿ ಬೆನ್ನಟ್ಟಿದ್ದ ಕೆಕೆಆರ್ ಪ್ಯಾಟ್ ಕಮಿನ್ಸ್ (ಔಟಾಗದೆ 66) ಆಂಡ್ರೆ ರಸೆಲ್ (54)  ಹಾಗೂ ದಿನೇಶ್ ಕಾರ್ತಿಕ್ (40) ಬಿರುಸಿನ ಬ್ಯಾಟಿಂಗ್ ಹೊರತಾಗಿಯೂ 19.1 ಓವರ್ ಗಳಲ್ಲಿ 202 ರನ್ ಗೆ ಆಲೌಟಾಯಿತು.

ಕಳಪೆ ಆರಂಭಕ್ಕೆ ಕೋಲ್ಕತಾ ಬೆಲೆ ತೆರಬೇಕಾಯಿತು.31 ರನ್ ಗೆ ಪ್ರಮುಖ 5 ವಿಕೆಟ್ ಗಳನ್ನು ಕಳೆದುಕೊಂಡಿತು. ರಸೆಲ್, ಕಾರ್ತಿಕ್ ಹಾಗೂ ಕಮಿನ್ಸ್ ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ಆಧರಿಸಿದರು. ದೀಪಕ್ ಚಹಾರ್(4-29) ಹಾಗೂ ಲುಂಗಿ (3-28) ಕೋಲ್ಕತಾದ ಗೆಲುವಿನ ಆಸೆಗೆ ತಣ್ಣೀರೆರಚಿದರು.

ಸತತ ಮೂರನೇ ಗೆಲುವು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರ್‌ಸಿಬಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

2021ರ ಐಪಿಎಲ್ ಟೂರ್ನಿಯಲ್ಲಿ 4 ಪಂದ್ಯಗಳ ಪೈಕಿ 3 ಪಂದ್ಯ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ಅಂಕ ಸಂಪಾದಿಸಿದೆ. ಇನ್ನು ಆರ್ ಸಿಬಿ ಸಹ ಮೂರು ಪಂದ್ಯ ಗೆದ್ದು 6 ಅಂಕ ಸಂಪಾದಿಸಿದ್ದರೂ ಚೆನ್ನೈ ರನ್ ರೇಟ್ ನಿಂದಾಗಿ ಅಗ್ರಸ್ಥಾನಕ್ಕೇರಿದೆ.