Wednesday, 11th December 2024

ಲಿವಿಂಗ್‌ಸ್ಟೋನ್ ಆಲ್‌ರೌಂಡರ್ ಆಟ: ಚೆನ್ನೈಗೆ ಹ್ಯಾಟ್ರಿಕ್‌ ಸೋಲು

ಮುಂಬೈ: ಲಿಯಾಮ್ ಲಿವಿಂಗ್‌ಸ್ಟೋನ್ (60 ರನ್ ಹಾಗೂ 2 ವಿಕೆಟ್) ಆಲ್‌ರೌಂಡರ್ ಆಟವು ಪಂಜಾಬ್ ಕಿಂಗ್ಸ್ ತಂಡಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಮೇಲೆ ಸವಾರಿ ಮಾಡಲು ನೆರವಾಯಿತು. ಈ ಮೂಲಕ ಮಯಂಕ್ ಅಗರವಾಲ್ ಪಡೆ ಆಡಿರುವ ಮೂರು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿದೆ.

ಸಿಎಸ್‌ಕೆ ಸತತ ಮೂರನೇ ಸೋಲಿನ ಮುಖಭಂಗಕ್ಕೊಳ ಗಾಗಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್, ಲಿಯಾಮ್ ಲಿವಿಂಗ್‌ಸ್ಟೋನ್ ಚೊಚ್ಚಲ ಐಪಿಎಲ್ ಅರ್ಧಶತಕದ ನೆರವಿನಿಂದ 180 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಗುರಿ ಬೆನ್ನತ್ತಿದ ಚೆನ್ನೈ ಶಿವಂ ದುಬೆ ಅರ್ಧಶತಕದ (57) ಹೊರತಾಗಿಯೂ 18 ಓವರ್‌ಗಳಲ್ಲಿ 126 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದು ಕೊಂಡಿತು.

ಚೇಸಿಂಗ್ ವೇಳೆ ಚೆನ್ನೈ 7.3 ಓವರ್‌ಗಳಲ್ಲಿ 36 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರಾಬಿನ್ ಉತ್ತಪ್ಪ (13), ಋತುರಾಜ್ ಗಾಯಕವಾಡ್ (1), ಮೊಯಿನ್ ಅಲಿ (0), ಅಂಬಟಿ ರಾಯುಡು (13) ಹಾಗೂ ನಾಯಕ ರವೀಂದ್ರ ಜಡೇಜ (0) ನಿರಾಸೆ ಮೂಡಿಸಿದರು.

ಅಂತಿಮ 10 ಓವರ್‌ಗಳಲ್ಲಿ ಸಿಎಸ್‌ಕೆ ಗೆಲುವಿಗೆ 128 ರನ್ ಬೇಕಿತ್ತು. ಈ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿ ಜೊತೆಗೂಡಿದ ಶಿವಂ ದುಬೆ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತಿರುಗೇಟು ನೀಡಿದರು. ಆದರೆ ಫಿಫ್ಟಿ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು.

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (23) ಔಟ್ ಆಗುವುದರೊಂದಿಗೆ ಚೆನ್ನೈ ಸೋಲು ಖಚಿತಗೊಂಡಿತು. ಪಂಜಾಬ್ ಪರ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡುತ್ತಿರುವ ವೈಭವ್ ಅರೋರಾ ಎರಡು ವಿಕೆಟ್ ಕಿತ್ತು ಮಿಂಚಿದರು. ರಾಹುಲ್ ಚಾಹರ್ ಮೂರು ಹಾಗೂ ಲಿವಿಂಗ್‌ಸ್ಟೋನ್ ಎರಡು ವಿಕೆಟ್ ಕಬಳಿಸಿದರು.

ಈ ಮೊದಲು ಮಧ್ಯಮ ಕ್ರಮಾಂಕದ ಬ್ಯಾಟರ್ ಲಿಯಾಮ್ ಲಿವಿಂಗ್‌ಸ್ಟೋನ್ ಬಿರುಸಿನ ಅರ್ಧಶತಕದ (60) ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು, ನಿಗದಿತ 20 ಓವರ್‌ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತ್ತು. ಲಿವಿಂಗ್‌ಸ್ಟೋನ್ ಕೇವಲ 27 ಎಸೆತಗಳಲ್ಲಿ ಐಪಿಎಲ್‌ನ ಚೊಚ್ಚಲ ಅರ್ಧಶತಕದ ಸಾಧನೆ ಮಾಡಿದರು.

32 ಎಸೆತಗಳನ್ನು ಎದುರಿಸಿದ ಲಿವಿಂಗ್‌ಸ್ಟೋನ್ ಇನ್ನಿಂಗ್ಸ್‌ನಲ್ಲಿ ತಲಾ ಐದು ಬೌಂಡರಿ ಹಾಗೂ ಸಿಕ್ಸರ್‌ಗಳು ಸೇರಿದ್ದವು.

ಕೊನೆಯ ಹಂತದಲ್ಲಿ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿರುವುದು ಪಂಜಾಬ್‌ಗೆ ಹಿನ್ನಡೆಯಾಗಿ ಪರಿಣಮಿಸಿತು. ಚೆನ್ನೈ ಪರ ಕ್ರಿಸ್ ಜಾರ್ಡನ್ ಹಾಗೂ ಡ್ವೇನ್ ಪ್ರಿಟೋರಿಯಸ್ ತಲಾ ಎರಡು ವಿಕೆಟ್ ಕಬಳಿಸಿದರು.

ಈ ಮೊದಲು ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರವೀಂದ್ರ ಜಡೇಜ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು.

ಚೆನ್ನೈ ತಂಡದಲ್ಲಿ ತುಷಾರ್ ದೇಶಪಾಂಡೆ ಸ್ಥಾನಕ್ಕೆ ಕ್ರಿಸ್ ಜಾರ್ಡನ್, ಪಂಜಾಬ್ ತಂಡದಲ್ಲಿ ಹರಪ್ರೀತ್ ಹಾಗೂ ರಾಜ್ ಬಾವಾ ಸ್ಥಾನಕ್ಕೆ ಕ್ರಮವಾಗಿ ವೈಭವ್ ಹಾಗೂ ಜಿತೇಶ್ ಆಯ್ಕೆಯಾಗಿದ್ದಾರೆ.