Wednesday, 11th December 2024

R Vithya Ramra: ಪಿ.ಟಿ.ಉಷಾ ರಾಷ್ಟ್ರೀಯ ದಾಖಲೆ ಮುರಿದ ವಿದ್ಯಾ

ಬೆಂಗಳೂರು: ಒಂದು ವರ್ಷಗಳ ಹಿಂದೆ ಇಂಡಿಯನ್‌ ಗ್ರ್ಯಾನ್‌ಪ್ರಿ(Indian Grand Prix) ಅಥ್ಲೆಟಿಕ್‌ ಕೂಟದಲ್ಲಿ ಕೂದಲೆಳೆ ಅಂತರದಲ್ಲಿ ಪಿ.ಟಿ.ಉಷಾ(PT Usha) ಅವರ 39 ವರ್ಷಗಳ ಹಳೆಯ ರಾಷ್ಟ್ರೀಯ ದಾಖಲೆಯನ್ನು ಮುರಿಯುವ ಅವಕಾಶವನ್ನು ಕಳೆದುಕೊಂಡಿದ್ದ ತಮಿಳುನಾಡಿನ ಆರ್‌.ವಿದ್ಯಾ ರಾಮರಾಜ್‌(R Vithya Ramraj) ಕೊನೆಗೂ ಈ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. ರಾಷ್ಟ್ರೀಯ ಓಪನ್‌ ಅಥ್ಲೆಟಿಕ್‌ ಕೂಟದಲ್ಲಿ(National Open Athletics Championship) ವಿದ್ಯಾ 400 ಮೀ. ಹರ್ಡಲ್ಸ್‌ ಓಟವನ್ನು 56.23 ಸೆ.ಗಳಲ್ಲಿ ಗುರಿ ತಲುಪಿ ಪಿ.ಟಿ.ಉಷಾ ದಾಖಲೆಯನ್ನು ಹಿಂದಿಕ್ಕಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ರೈಲ್ವೇಸ್‌ನ ಸಿಂಚಲ್ (57.60ಸೆ.) ಮತ್ತು ಕರ್ನಾಟಕದ ಪ್ರಜ್ಞಾ (57.90ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.

ಭಾರತ ಮಾಜಿ ಅಥ್ಲೀಟ್​ ಆಗಿರುವ ಪಿಟಿ ಉಷಾ ಅವರು 1984ರ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ 55.42 ಸೆಕೆಂಡ್​ಗಳಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ(PT Usha national record) ಗುರಿ ತಲುಪಿ ನಾಲ್ಕನೇ ಸ್ಥಾನ ಪಡೆದಿದ್ದರು. 24 ವರ್ಷದ ವಿದ್ಯಾ ಅವರು ಕಳೆದ ಇಂಡಿಯನ್‌ ಗ್ರ್ಯಾನ್‌ಪ್ರಿ ಟೂರ್ನಿಯಲ್ಲಿ  0.01 ಸೆಕೆಂಡ್​ ಅಂತರದಲ್ಲಿ ಈ ದಾಖಲೆಯನ್ನು ಮುರಿಯುವ ಅವಕಾಶವನ್ನು ಕಳೆದುಕೊಂಡಿದ್ದರು. ಈ ಬಾರಿ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯುವಲ್ಲಿ ಸಫಲರಾಗಿದ್ದಾರೆ.

ಶ್ರೇಷ್ಠ ಪ್ರದರ್ಶನದ ಬಳಿಕ ಮಾತನಾಡಿದ ಆರ್‌.ವಿದ್ಯಾ, ‘ಉಷಾ ಮೇಡಂ ಭಾರತದ ದಿಗ್ಗಜ ಅಥ್ಲೀಟ್‌. ಅವರೇ ನನಗೆ ಸ್ಫೂರ್ತಿ. ಅವರ ದಾಖಲೆಯನ್ನು ಇಷ್ಟು ಸುದೀರ್ಘ ಅವಧಿಯವರೆಗೆ ಯಾರಿಗೂ ಮುರಿಯಲು ಆಗಿರಲಿಲ್ಲ. ನಾನು ಇದನ್ನು ಸಾಧಿಸಿದ್ದೇನೆʼ ಎಂದು ಗೆಲುವಿನ ಬಳಿಕ ಪ್ರತಿಕ್ರಿಯಿಸಿದರು. ತಮಿಳುನಾಡಿನ ನಿತಿನ್‌ 1118 ಅಂಕಗಳೊಂದಿಗೆ ಮತ್ತು ಎಸ್‌ಎಸ್‌ಸಿಬಿಯ ಆಯನ್ಸಿ ಸೋಜನ್‌ ಅವರು 1153 ಅಂಕಗಳೊಂದಿಗೆ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಅತ್ಯುತ್ತಮ ಅಥ್ಲೀಟ್‌ ಪ್ರಶಸ್ತಿ ಪಡೆದರು. ಸರ್ವಿಸಸ್‌ ತಂಡ 137 ಪಾಯಿಂಟ್ಸ್‌ ಗಳಿಸಿ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆದರೆ, 201 ಅಂಕ ಕಲೆಹಾಕಿದ ರೈಲ್ವೇಸ್‌ನ ತಂಡ ಮಹಿಳೆಯರ ವಿಭಾದಲ್ಲಿ ಚಾಂಪಿಯನ್‌ ಆಯಿತು. 318 ಅಂಕ ಕಲೆಹಾಕಿದ ರೈಲ್ವೇಸ್‌ ತಂಡ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿತು.