Wednesday, 11th December 2024

ಅಜಿಂಕ್ಯ ಶತಕದ ಮೆರೆದಾಟ, 82 ಮುನ್ನಡೆಯಲ್ಲಿ ಪ್ರವಾಸಿಗರು

ಮೇಲ್ಬರ್ನ್‌: ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಅಜಿಂಕ್ಯಾ ರೆಹಾನೆ ಮೆಲ್ಬೋರ್ನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ 2 ನೇ ಟೆಸ್ಟ್ ನ ಎರಡನೇ ದಿನ ಶತಕ(104 ಅಜೇಯ) ಬಾರಿಸಿ ಮಿಂಚಿದರು. ರಹಾನೆಗೆ ಸಮರ್ಥ ಸಾಥ್‌ ನೀಡುತ್ತಿರುವ ಆಲ್ರೌಂಡರ್‌ ರವೀಂದ್ರ ಜಡೇಜಾ ಕೂಡ ಅರ್ಧಶತಕದ ಹಾದಿಯಲ್ಲಿದ್ದಾರೆ.

ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ಐದು ವಿಕೆಟ್‌ ಕಳೆದುಕೊಂಡು 277 ರನ್‌ ಗಳಿಸಿದ್ದು, ಒಟ್ಟಾರೆ, 82 ರನ್‌ ಮುನ್ನಡೆ ಯಲ್ಲಿತ್ತು. ಆಸ್ಟ್ರೇಲಿಯಾ ತಂಡ ಮೊದಲನೇ ಇನ್ನಿಂಗ್ಸ್ ನಲ್ಲಿ 195 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು.

ಆಸ್ಟ್ರೇಲಿಯಾ ತಂಡದ ಗುರಿಯನ್ನು ಬೆನ್ನಟ್ಟಿದ ಭಾರತದ ಆರಂಭಿಕ ಆಟಗಾರರಾದ ಶುಭ್ ಮನ್ ಗಿಲ್ ಉತ್ತಮ ಆರಂಭ ನೀಡಿದರು. ಆದರೆ 11 ಎಸೆತಗಳ ಅಂತರದಲ್ಲಿ ಗಿಲ್ ಹಾಗೂ ಪೂಜಾರಾ ವಿಕೆಟ್ ಒಪ್ಪಿಸಿ ನಡೆದಾಗ ಭಾರತ ಸಂಕಷ್ಟದಲ್ಲಿತ್ತು. ನಂತರ ಊಟದ ವಿರಾಮದ ವೇಳೆಗೆ ಹನುಮ ವಿಹಾರಿ (29) ಹಾಗೂ ರಿಷಭ್ ಪಂತ್ ವಿಕೆಟ್ ಗಳನ್ನು ಕಳೆದುಕೊಂಡಾಗ ಅಜಿಂಕ್ಯಾ ರೆಹಾನೆ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ, ಆಸ್ಟ್ರೇಲಿಯಾ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದರು. ಒಂದೆಡೆ ಅಜಿಂಕ್ಯಾ ರೆಹಾನೆ ಅವರ ಸ್ಥಿರತೆ ಹಾಗೂ ರಿಷಭ್ ಪಂತ್ ಅವರ ಬಿರುಸಿನ ಬ್ಯಾಟಿಂಗ್ ಎದುರು ಆಸ್ಟ್ರೇಲಿಯಾ ಬೌಲರ್ ಗಳು ಮಂಕಾದರು.

ಮಿಚೆಲ್ ಸ್ಟಾರ್ಕ್ 61 ರನ್ ಗಳನ್ನು ನೀಡಿ 2 ವಿಕೆಟ್ ಪಡೆದರೆ, ಪ್ಯಾಟ್ ಕಮ್ಮಿನ್ಸ್ 71 ರನ್ ಗಳನ್ನು ನೀಡಿ 2 ವಿಕೆಟ್ ಕಬಳಿಸಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.