Friday, 13th December 2024

Anvay Dravid: ವಿಜಯ್‌ ಮರ್ಚೆಂಟ್‌ ಟ್ರೋಫಿ ಟೂರ್ನಿಯಲ್ಲಿ ಶತಕ ಸಿಡಿಸಿದ ಅನ್ವಯ್‌ ದ್ರಾವಿಡ್‌!

Rahul Dravid's younger son Anvay dravid smashes maiden century for Karnataka at Vijay Merchant Trophy

ಬೆಂಗಳೂರು: ಭಾರತೀಯ ಕ್ರಿಕೆಟ್‌ ದಿಗ್ಗಜ ಹಾಗೂ ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಎರಡನೇ ಪುತ್ರ ಅನ್ವಯ್‌ ದ್ರಾವಿಡ್‌ (Anvay Dravid) ಪ್ರಸ್ತುತ ನಡೆಯುತ್ತಿರುವ ವಿಜಯ್‌ ಮರ್ಚೆಂಟ್‌ ಟ್ರೋಫಿ ಟೂರ್ನಿಯ ಜಾರ್ಖಂಡ್‌ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಆಂಧ್ರ ಪ್ರದೇಶದ ಮುಳಪಾಡುವಿನಲ್ಲಿ ನಡೆದಿದ್ದ ಮೂರು ದಿನಗಳ ಪಂದ್ಯದಲ್ಲಿ ಕರ್ನಾಟಕ ತಂಡದ ಪರ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಅನ್ವಯ್‌, ಭರ್ಜರಿ ಶತಕ ಸಿಡಿಸುವ ಮೂಲಕ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.

ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಅತ್ಯುತ್ತಮ ಬ್ಯಾಟ್‌ ಮಾಡಿದ್ದ ಅನ್ವಯ್‌ ದ್ರಾವಿಡ್‌ ಎದುರಿಸಿದ 153 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ ಅಜೇಯ 100 ರನ್‌ಗಳನ್ನು ಕಲೆ ಹಾಕಿದರು. ಅನ್ವಯ್‌ ಗೌಡ ಮಾತ್ರವಲ್ಲದೆ, ಕರ್ನಾಟಕ ತಂಡದ ಅಗ್ರ ಬ್ಯಾಟ್ಸ್‌ಮನ್‌ಗಳು ಕೂಡ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಓಪನರ್‌ ಆರ್ಯ ಗೌಡ ಹಾಗೂ ನಾಯಕ ಧ್ರುವ್‌ ಕೃಷ್ಣನ್‌ ಜೋಡಿ 71.4 ಓವರ್‌ಗಳಿಗೆ 229 ರನ್‌ಗಳ ಜೊತೆಯಾಟವನ್ನು ಆಡಿತ್ತು. ಆ ಮೂಲಕ ಕರ್ನಾಟಕ ತಂಡಕ್ಕೆ ಉತ್ತಮ ಆರಂಭವನ್ನು ನೀಡಿತ್ತು.

441 ರನ್ ಗಳಿಸಿದ ಕರ್ನಾಟಕ ತಂಡ

ಅಂದ ಹಾಗೆ ಅನ್ವಯ್‌ ದ್ರಾವಿಡ್‌ ಶತಕದ ನೆರವಿನಿಂದ ಕರ್ನಾಟಕ ತಂಡ 123.3 ಓವರ್‌ಗಳಲ್ಲಿ 4 ವಿಕೆಟ್‌ಗೆ 441 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಅಲ್ಲದೆ, ಸ್ಯಮಂತಕ್ ಅನಿರುದ್ಧ್ (76) ಅವರೊಂದಿಗೆ ಮೂರನೇ ವಿಕೆಟ್‌ಗೆ 167 ರನ್‌ಗಳ ದೊಡ್ಡ ಜೊತೆಯಾಟವನ್ನು ಅನ್ವಯ್‌ ಆಡಿದ್ದರು. ಇದಾದ ನಂತರ ನಾಲ್ಕನೇ ವಿಕೆಟ್‌ಗೆ ಸುಕುರ್ತ್ ಜೆ (33) ಅವರೊಂದಿಗೆ 43 ರನ್ ಸೇರಿಸಿದರು.

ಮೂರು ಅಂಕ ಕಲೆ ಹಾಕಿದ್ದ ಕರ್ನಾಟಕ

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ್ದ ಜಾರ್ಖಂಡ್ ತಂಡ 128.4 ಓವರ್‌ಗಳಲ್ಲಿ 387 ರನ್ ಗಳಿಗೆ ಆಲೌಟ್ ಆಗಿತ್ತು. ಕರ್ನಾಟಕ ತನ್ನ ಮೊದಲ ಇನಿಂಗ್ಸ್‌ನಲ್ಲಿನ ಮುನ್ನಡೆಯ ಆಧಾರದ ಮೇಲೆ ಡ್ರಾದಿಂದ ಮೂರು ಅಂಕಗಳನ್ನು ಗಳಿಸಿದರೆ, ಜಾರ್ಖಂಡ್ ಒಂದು ಅಂಕ ಗಳಿಸಿತು.

ದ್ವಿಶತಕ ಸಿಡಿಸಿದ್ದ ಅನ್ವಯ್‌ ದ್ರಾವಿಡ್‌

ಕಳೆದ ವರ್ಷ 14 ವರ್ಷದೊಳಗಿನವರ ಕರ್ನಾಟಕ ತಂಡದ ನಾಯಕತ್ವ ವಹಿಸಿದ್ದರು. ಇತ್ತೀಚೆಗೆ ಕೆಎಸ್‌ಸಿಎ 16 ವರ್ಷದೊಳಗಿನವರ ಅಂತರ ವಲಯದ ಪಂದ್ಯದಲ್ಲಿ ತುಮಕೂರು ವಲಯದ ವಿರುದ್ಧ ಬೆಂಗಳೂರು ವಲಯದ ಪರವಾಗಿ ಅಜೇಯ ದ್ವಿಶತಕ (200) ಗಳಿಸಿದ್ದರು. ಅನ್ವಯ ಹಿರಿಯ ಸಹೋದರ ಸಮಿತ್ 19 ವರ್ಷದ ಆಲ್‌ರೌಂಡರ್. ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅಂಡರ್-19 ತವರು ಸರಣಿಯಲ್ಲಿ ಸಮಿತ್ ಭಾರತವನ್ನು ಪ್ರತಿನಿಧಿಸಿದ್ದರು. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವುದಕ್ಕೂ ಮುನ್ನ ಸಮಿತ್ ಮಹಾರಾಜ ಟಿ20 ಕ್ರಿಕೆಟ್‌ ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ ಪರ ಆಡಿದ್ದರು.

ಈ ಸುದ್ದಿಯನ್ನು ಓದಿ: Ranji Trophy: ಕರ್ನಾಟಕ ರಣಜಿ ಸಂಭಾವ್ಯ ತಂಡದಲ್ಲಿ ಸಮಿತ್‌ ದ್ರಾವಿಡ್‌