Thursday, 12th December 2024

Ranji Trophy: ಕರ್ನಾಟಕ ವಿರುದ್ಧದ ಪಂದ್ಯಕ್ಕೆ ವೇಗಿ ಶಮಿ ಅಲಭ್ಯ

ಬೆಂಗಳೂರು: ಟೀಮ್‌ ಇಂಡಿಯಾದ ವೇಗಿ ಮೊಹಮ್ಮದ್ ಶಮಿ(Mohammed Shami) ಅವರ ಕ್ರಿಕೆಟ್‌ ಕಮ್‌ಬ್ಯಾಕ್‌ ಇನಷ್ಟೂ ತಡವಾಗುವ ಸಾಧ್ಯತೆ ಇದೆ. ದೇಶೀಯ ಟೂರ್ನಿಯನ್ನಾಡಲು ಎದುರು ನೋಡುತ್ತಿದ್ದ ಶಮಿ ಕರ್ನಾಟಕ ವಿರುದ್ಧದ ರಣಜಿ(Ranji Trophy) ಪಂದ್ಯದಲ್ಲಿ ಬಂಗಾಳ ಪರ ಕಣಕ್ಕಿಳಿಯುವುದಿಲ್ಲ ಎಂದು ವರದಿಯಾಗಿದೆ. ಕರ್ನಾಟಕ ಎದುರು ನವೆಂಬರ್ 6ರಿಂದ 9ರ ವರೆಗೆ ನಡೆಯಲಿರುವ ಪಂದ್ಯಕ್ಕೆ ಅನುಸ್ತಪ್ ಮಜುಂದಾರ್ ನಾಯಕತ್ವದ ಬಂಗಾಳ ತಂಡ ಪ್ರಕಟಗೊಂಡಿದ್ದು ಇದರಲ್ಲಿ ಶಮಿ ಹೆಸರು ಕಾಣಿಸಿಕೊಂಡಿಲ್ಲ. ‘ಶಮಿ, ಕರ್ನಾಟಕದ ವಿರುದ್ಧ ಆಡುವುದಿಲ್ಲ. ಮಧ್ಯಪ್ರದೇಶದ ಎದುರು ಕಾಣಿಸಿಕೊಳ್ಳಲಿದ್ದಾರೆ. ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಆಲೋಚನೆಯಲ್ಲಿದ್ದಾರೆ’ ಎಂದು ತಂಡದ ಮೂಲಗಳು ತಿಳಿಸಿವೆ.

ಶಮಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಸರಣಿ ಮೂಲಕ ತಂಡಕ್ಕೆ ವಾಪಸ್‌ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಫಿಟ್‌ನೆಸ್‌ ಇಲ್ಲದ ಕಾರಣ ಅವರನ್ನು ಈ ಸರಣಿಯಿಂದಲೂ ಕೈಬಿಡಲಾಗಿತ್ತು. ಮೂಲಗಳ ಪ್ರಕಾರ ಶಮಿ ಮಧ್ಯಪ್ರದೇಶ ವಿರುದ್ಧ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನವೆಂಬರ್‌ 13ರಂದು ಆರಂಭಗೊಳ್ಳುವ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಇದನ್ನೂ ಓದಿ IND vs NZ: ವಿಕೆಟ್‌ ಪತನದಲ್ಲೂ ದಾಖಲೆ ಬರೆದ ವಾಂಖೆಡೆ

ಈವರೆಗೆ ಬಂಗಾಲ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಉತ್ತರ ಪ್ರದೇಶ, ಕೇರಳ ಎದುರಿನ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಸದ್ಯ 5 ಅಂಕಗಳೊಂದಿಗೆ ‘ಸಿ’ ಗುಂಪಿನ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಬಿಹಾರ ಎದುರಿನ ಇನ್ನೊಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

34 ವರ್ಷದ ಶಮಿ ಪಂದ್ಯವಾಡದೆ ಸರಿ ಸುಮಾರು ಒಂದು ವರ್ಷಗಳೇ ಕಳೆದಿವೆ. 2023 ಏಕದಿನ ವಿಶ್ವಕಪ್‌ ಫೈನಲ್‌ ಅವರ ಕೊನೆಯ ಪಂದ್ಯವಾಗಿತ್ತು. ಇದಾದ ಬಳಿಕ ಅವರು ಲಂಡನ್‌ನಲ್ಲಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.