Tuesday, 12th November 2024

Ranji Trophy: ರಣಜಿ ಟೂರ್ನಿಗೆ ಶಮಿ ಅಲಭ್ಯ

ಕೋಲ್ಕತಾ: ದೇಶೀಯ ಕ್ರಿಕೆಟ್‌ ಆಡುವ ಮೂಲಕ ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ನಿರೀಕ್ಷೆಯಲ್ಲಿದ್ದ ಟೀಮ್‌ ಇಂಡಿಯಾದ ಸ್ಟಾರ್‌ ವೇಗಿ ಮೊಹಮ್ಮದ್‌ ಶಮಿಗೆ(Mohammed Shami) ಮತ್ತೆ ಹಿನ್ನಡೆಯಾಗಿದೆ. ಅವರನ್ನು ರಣಜಿ ಟೂರ್ನಿಯ(Ranji Trophy) ಆರಂಭಿಕ ಸುತ್ತಿನ ಪಂದ್ಯಗಳಿಂದ ಕೈಬಿಡಲಾಗಿದೆ. ಶಮಿ ಬಂಗಾಲ(Bengal) ತಂಡದ ಸದಸ್ಯನಾಗಿದ್ದಾರೆ. ಪೂರ್ತಿ ಫಿಟ್‌ನೆಸ್‌ ಹೊಂದಿರದ ಕಾರಣ ಪಂದ್ಯವನ್ನಾಡಿಸಿ ಮತ್ತೆ ಗಾಯಗೊಂಡರೆ ಕಷ್ಟ ಎನ್ನುವುದು ಬಿಸಿಸಿಐ ಲೆಕ್ಕಾಚಾರ. ಆದ್ದರಿಂದ ಇಂಥದೊಂದು ತೀರ್ಮಾನಕ್ಕೆ ಬರಲಾಗಿದೆ. ಹಿರಿಯ ಆಟಗಾರರಾದ ವೃದ್ಧಿಮಾನ್‌ ಸಾಹಾ(Wriddhiman Saha), ಸುದೀಪ್‌ ಚಟರ್ಜಿ ರಣಜಿ ತಂಡಕ್ಕೆ ವಾಪಸಾಗಿದ್ದಾರೆ.

ಮೊಹಮ್ಮದ್‌ ಶಮಿ ಭಾರತದಲ್ಲೇ ನಡೆದಿದ್ದ 2023ರ ಏಕದಿನ ವಿಶ್ವಕಪ್‌ ಪಂದ್ಯಾವಳಿ ಬಳಿಕ ಯಾವುದೇ ಕ್ರಿಕೆಟ್‌ ಸರಣಿ ಆಡಿಲ್ಲ. ವಿಶ್ವ ಕಪ್‌ ಬಳಿಕ ಶಮಿ ಲಂಡನ್‌ನಲ್ಲಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಚೇತರಿಸಿಕೊಂಡಿದ್ದರೂ ಕೂಡ ಸಂಪೂರ್ಣ ಫಿಟ್‌ ಆಗಿಲ್ಲ. ನ್ಯೂಜಿಲ್ಯಾಂಡ್‌ ವಿರುದ್ಧದ ತವರಿನ ಟೆಸ್ಟ್‌ ಸರಣಿಗೂ ಶಮಿ ಲಭ್ಯರಾಗುವುದು ಅನುಮಾನ. ವರ್ಷದ ಕೊನೆಯಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯಲ್ಲಿ ಶಮಿ ಕಣಕ್ಕಿಳಿಯಬಹುದು.

ಇದನ್ನೂ ಓದಿ Virat Kohli : ಸಚಿನ್‌ ತೆಂಡೂಲ್ಕರ್ ಮತ್ತೊಂದು ದಾಖಲೆ ಮುರಿದ ವಿರಾಟ್ ಕೊಹ್ಲಿ

ಶಮಿ ಆಸ್ಟ್ರೇಲಿಯಾದಲ್ಲಿ ಉತ್ತಮ ಟೆಸ್ಟ್ ದಾಖಲೆಯನ್ನು ಹೊಂದಿದ್ದಾರೆ, ಎಂಟು ಪಂದ್ಯಗಳಲ್ಲಿ 32.16 ಸರಾಸರಿಯಲ್ಲಿ 6/56 ರ ಅತ್ಯುತ್ತಮ ಅಂಕಿ ಅಂಶಗಳೊಂದಿಗೆ 31 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಎರಡು ಬಾರಿ ಐದು ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ. ಮುಂದಿನ ವರ್ಷ ಚಾಂಪಿಯನ್ಸ್​ ಟ್ರೋಫಿ ಕೂಡ ನಡೆಯುವ ಕಾರಣ ಶಮಿ ಅವರ ಪಾತ್ರ ನಿರ್ಣಾಯಕ ಹೀಗಾಗಿ ಬಿಸಿಸಿಐ ಶಮಿಯನ್ನು ಆತುರದಿಂದ ಆಡಿಸಲು ಮುಂದಾಗುವುದು ಅನುಮಾನ. ಸಂಪೂರ್ಣ ಚೇತರಿಕೆಯ ಬಳಿಕವೇ ಅವರಿಗೆ ಆಡುವ ಅವಕಾಶ ಕಲ್ಪಿಸಬಹುದು.

34 ವರ್ಷದ ಶಮಿ ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.

ರಣಜಿಗೆ ಸರ್ಫರಾಜ್‌ ಅಲಭ್ಯ

ಇರಾನಿ ಕಪ್‌ನಲ್ಲಿ ದ್ವೀಶತಕ ಬಾರಿಸಿ ಮಿಂಚಿದ್ದ ಮುಂಬೈ ತಂಡದ ಆಟಗಾರ ಸರ್ಫರಾಜ್‌ ಖಾನ್‌ ಕೂಡ ರಣಜಿ ಟ್ರೋಫಿ ಎಲೈಟ್‌ ಲಭ್ಯರಾಗುತ್ತಿಲ್ಲ. ನ್ಯೂಜಿಲ್ಯಾಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಸರ್ಫರಾಜ್‌ ಅವಕಾಶ ಪಡೆಯುವ ಕಾರಣದಿಂದ ಅವರನ್ನು ಆಯ್ಕೆ ಮಾಡಲಾಗಲ್ಲಿಲ್ಲ ಎನ್ನಲಾಗಿದೆ.