Saturday, 14th December 2024

ಸೋತರೂ ಪ್ಲೇ ಆಫ್ ನಲ್ಲಿ ಸ್ಥಾನ ಉಳಿಸಿಕೊಂಡ ಬೆಂಗಳೂರು

ಅಬುಧಾಬಿ: ಬೆಂಗಳೂರು ನೀಡಿದ್ದ 152 ರನ್‌ಗಳ ಗುರಿಯನ್ನು ನಿರಾಯಾಸವಾಗಿ ಮುಟ್ಟಿದ ಡೆಲ್ಲಿ ಕ್ಯಾಪಿಟಲ್‌ ಪ್ಲೇಆಫ್ನಲ್ಲಿ 2ನೇ ಸ್ಥಾನಕ್ಕೆ ಭಡ್ತಿ ಪಡೆಯಿತು. 2ನೇ ಸ್ಥಾನದಲ್ಲಿದ್ದ ಬೆಂಗಳೂರು 3ನೇ ಸ್ಥಾನಕ್ಕೆ ಕುಸಿತ ಕಂಡಿತು.

ಮಂಗಳವಾರ ಮುಂಬೈ ಮತ್ತು ಸನ್‌ರೈಸರ್ಸ್‌ ನಡುವೆ ಕಡೇ ಲೀಗ್‌ ಪಂದ್ಯವಿದ್ದು, ಈ ಪಂದ್ಯದಲ್ಲೇನಾದರೂ ಹೈದರಾಬಾದ್‌ ಗೆದ್ದರೆ ನಾಲ್ಕನೇ ತಂಡವಾಗಿ ಪ್ಲೇ ಆಫ್ಗೆ ಪ್ರವೇಶಿಸಲಿದೆ. ಕೋಲ್ಕತಾ ಕೂಟದಿಂದ ಹೊರಬೀಳಲಿದೆ. ಒಂದು ವೇಳೆ ಹೈದರಾಬಾದ್‌ ಸೋತರೆ, ಪ್ಲೇಆಫ್ನಲ್ಲಿ ಈಗಿ ರುವ ನಾಲ್ಕು ತಂಡಗಳೇ ಉಳಿಯಲಿವೆ.

ಮಿಂಚಿದ ರಹಾನೆ, ಧವನ್‌
ಬೆಂಗಳೂರು ನೀಡಿದ್ದ ಗುರಿ ಮುಟ್ಟುವಲ್ಲಿ ಅಜಿಂಕ್ಯ ರಹಾನೆ ಮತ್ತು ಶಿಖರ್‌ ಧವನ್‌ ಪಾತ್ರ ನಿರ್ಣಾಯಕವಾಯಿತು. ಆರಂಭಿಕ ನಾಗಿ ಬಂದ ಧವನ್‌ 41 ಎಸೆತಗಳಲ್ಲಿ 54 ರನ್‌ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು.

ಪೃಥ್ವಿ ಶಾ ಈ ಪಂದ್ಯದಲ್ಲೂ ವೈಫ‌ಲ್ಯ ಅನುಭವಿಸಿದರು. ಶಾ ಔಟಾದ ನಂತರ ಬಂದ ಅಜಿಂಕ್ಯ ರಹಾನೆ 46 ಎಸೆತಗಳಲ್ಲಿ 60 ರನ್‌ ಗಳಿಸಿದರು. ಹಾಗೆಯೇ ನಾಯಕ ಶ್ರೇಯಸ್‌ ಅಯ್ಯರ್‌ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಕಡೆಗೆ ಪಂತ್‌ ಮತ್ತು ಸ್ಟಾನಿಸ್‌ ಪಂದ್ಯ ಗೆಲ್ಲಿಸಿಕೊಟ್ಟರು. ಬೆಂಗಳೂರು ಪರ 4 ಓವರ್‌ಗಳಲ್ಲಿ 26 ರನ್‌ ನೀಡಿ 2 ವಿಕೆಟ್‌ ಪಡೆದ ಅಹ್ಮದ್‌ ಯಶಸ್ವೀ ಬೌಲರ್‌ ಎನ್ನಿಸಿ ದರು.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ರಾಯಲ್‌ ಚಾಲೆಂಜರ್ಸ್‌ ಆಫ್ ಬೆಂಗಳೂರು ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿ ಟಲ್ಸ್‌ ವಿರುದ್ಧ 7 ವಿಕೆಟಿಗೆ 152 ರನ್‌ ಪೇರಿಸಿತು. ಪಡಿಕ್ಕಲ್‌ ಅವರ 5ನೇ ಅರ್ಧ ಶತಕ, ಎಬಿಡಿ ಅವರ ಬಿರುಸಿನ ಬ್ಯಾಟಿಂಗ್ ಮೊದಲ ಸರದಿಯ ಹೈಲೈಟ್‌ ಆಗಿತ್ತು.

ಆರಂಭಕಾರ ಜೋಶ್‌ ಫಿಲಿಪ್‌ (12) ಅವರನ್ನು ಆರ್‌ಸಿಬಿ ಬಹಳ ಬೇಗ ಕಳೆದುಕೊಂಡಿತು. ಈ ನಡುವೆ ಪಡಿಕ್ಕಲ್‌ ನೂತನ ಮೈಲಿ ಗಲ್ಲೊಂದನ್ನು ನೆಟ್ಟರು. 25 ರನ್‌ ಗಳಿಸಿದ ವೇಳೆ, ಪದಾರ್ಪಣ ಐಪಿಎಲ್‌ ಋತುವಿನಲ್ಲೇ ಅತ್ಯಧಿಕ ರನ್‌ ಬಾರಿಸಿದ ಭಾರತದ “ಅನ್‌ ಕ್ಯಾಪ್ಡ್ ಪ್ಲೇಯರ್‌’ ಎನಿಸಿದರು. ಶ್ರೇಯಸ್‌ ಅಯ್ಯರ್‌ 2015ರಲ್ಲಿ ನಿರ್ಮಿಸಿದ 439 ರನ್ನುಗಳ ದಾಖಲೆಯನ್ನು ಮುರಿದರು. ಬಳಿಕ 5ನೇ ಅರ್ಧ ಶತಕದೊಂದಿಗೆ ಮೆರೆದರು. ಶಿಖರ್‌ ಧವನ್‌ (2008) ಮತ್ತು ಶ್ರೇಯಸ್‌ ಅಯ್ಯರ್‌ (2015) ಅವರ 4 ಅರ್ಧ ಶತಕಗಳ ದಾಖಲೆ ಪತನಗೊಂಡಿತು.

13ನೇ ಓವರ್‌ನಲ್ಲಿ ಆರ್‌. ಅಶ್ವಿ‌ನ್‌ ನಾಯಕ ಕೊಹ್ಲಿ ಅವರ ವಿಕೆಟ್‌ ಉರುಳಿಸಿದರು. ಆರ್‌ಸಿಬಿ ಕಪ್ತಾನನ ಹೊಡೆತ ಡೀಪ್‌ ಮಿಡ್‌ ವಿಕೆಟ್‌ನಲ್ಲಿ ಕ್ಯಾಚ್‌ ಆಯಿತು. ಕೊಹ್ಲಿ ಗಳಿಕೆ 24 ಎಸೆತಗಳಿಂದ 29 ರನ್‌ (2 ಬೌಂಡರಿ, 1 ಸಿಕ್ಸರ್‌). ದ್ವಿತೀಯ ವಿಕೆಟ್‌ ಜತೆಯಾಟ ದಲ್ಲಿ 57 ರನ್‌ ಒಟ್ಟುಗೂಡಿತು.

15ನೇ ಓವರಿನಲ್ಲಿ ಪಡಿಕ್ಕಲ್‌ ಅವರ ಅರ್ಧ ಶತಕ ಮತ್ತು ತಂಡದ 100 ರನ್‌ ಒಟ್ಟಿಗೇ ದಾಖಲಾಯಿತು. 16ನೇ ಓವರಿನಲ್ಲಿ ನೋರ್ಜೆ ಪಡಿಕ್ಕಲ್‌ ಮತ್ತು ಕ್ರಿಸ್‌ ಮಾರಿಸ್‌ ಅವರನ್ನು ಒಟ್ಟಿಗೇ ಪೆವಿಲಿಯನ್ನಿಗೆ ಅಟ್ಟಿದರು. ಪಡಿಕ್ಕಲ್‌ 41 ಎಸೆತಗಳಿಂದ 50 ರನ್‌ ಬಾರಿಸಿ ದರೆ (5 ಬೌಂಡರಿ), ಮಾರಿಸ್‌ ಖಾತೆ ತೆರೆಯಲು ವಿಫ‌ಲರಾದರು. ಆರ್‌ಸಿಬಿಯ ದೊಡ್ಡ ಸ್ಕೋರಿಗೆ ಬ್ರೇಕ್‌ ಬಿತ್ತು. ಎಬಿಡಿ 21 ಎಸೆತಗಳಿಂದ 35 ರನ್‌ ಹೊಡೆದರು (1 ಬೌಂಡರಿ, 2 ಸಿಕ್ಸರ್‌). ಡೆಲ್ಲಿ ಪರ ನೋರ್ಜೆ 3, ರಬಾಡ 2 ವಿಕೆಟ್‌ ಕಿತ್ತು ಮಿಂಚಿದರು.