Saturday, 14th December 2024

ಸ್ಪಿನ್‌ ಸುಳಿಗೆ ಸಿಲುಕಿದ ಆರ್‌ಸಿಬಿ: ಚೊಚ್ಚಲ ಟ್ರೋಫಿ ಗೆಲ್ಲುವ ಕನಸು ಭಗ್ನ

ಶಾರ್ಜಾ: ಸುನೀಲ್‌ ನಾರಾಯಣ್‌ ಅವರ ಸ್ಪಿನ್‌ ಸುಳಿಗೆ ಸಿಲುಕಿದ ಕೊಹ್ಲಿ ಪಡೆ ಕೆಕೆಆರ್‌ಗೆ 4 ವಿಕೆಟ್‌ಗಳಿಂದ ಶರಣಾಗಿ ಕೂಟದಿಂದ ಹೊರಬಿದ್ದಿದೆ. ಇದರೊಂದಿಗೆ ಐಪಿಎಲ್‌ನಲ್ಲಿ ಆರ್‌ಸಿಬಿಯ ಚೊಚ್ಚಲ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿದೆ. ಕೊನೆಗೂ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಪ್ ಗೆಲ್ಲುವ ಆಸೆಯೂ ಈಡೇರಲಿಲ್ಲ.

ಇದರೊಂದಿಗೆ ವಿರಾಟ್‌ ಕೊಹ್ಲಿ ಅವರ ಆರ್‌ಸಿಬಿ ನಾಯಕತ್ವದ ನಂಟು ಬರಿಗೈಯಲ್ಲಿ ಕೊನೆ ಗೊಂಡಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದರೂ ಆರ್‌ಸಿಬಿಗೆ ಗಳಿಸಲು ಸಾಧ್ಯವಾದದ್ದು 7 ವಿಕೆಟಿಗೆ 138 ರನ್‌ ಮಾತ್ರ. ಜವಾಬು ನೀಡಿದ ಕೆಕೆಆರ್‌ 19.4 ಓವರ್‌ಗಳಲ್ಲಿ 6 ವಿಕೆಟಿಗೆ 139 ರನ್‌ ಬಾರಿಸಿ ವಿಜಯಿ ಯಾಯಿತು.

ಚೇಸಿಂಗ್‌ ವೇಳೆ ಕೊನೆಯ ಹಂತದಲ್ಲಿ ಮಾರ್ಗನ್‌ ಪಡೆ ಒತ್ತಡಕ್ಕೆ ಸಿಲುಕಿದರೂ ಯಶಸ್ವಿಯಾಗಿ ನಿಭಾಯಿಸಿತು. ಗಿಲ್‌ ಮತ್ತು ಅಯ್ಯರ್‌ ಮೊದಲ ವಿಕೆಟಿಗೆ 41 ರನ್‌ ಗಳಿಸಿ ಉತ್ತಮ ಬುನಾದಿ ನಿರ್ಮಿಸಿದರು. ರಾಣಾ 23, ಬ್ಯಾಟಿಂಗಿನಲ್ಲೂ ಮಿಂಚಿದ ಸುನೀಲ್‌ ನಾರಾಯಣ್‌ 26 ರನ್‌ ಬಾರಿಸಿ ತಂಡವನ್ನು ದಡ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕೆರಿಬಿಯನ್‌ ಮಿಸ್ಟರಿ ಸ್ಪಿನ್ನರ್‌ ಸುನೀಲ್‌ ನಾರಾಯಣ್‌ ಓವರಿಗೆ ಒಂದೊಂದರಂತೆ ವಿಕೆಟ್‌ ಬೇಟೆಯಾಡುತ್ತ ಕೆಕೆಆರ್‌ ಪಾಲಿನ ಬೌಲಿಂಗ್‌ ಹೀರೋ ಎನಿಸಿ ಕೊಂಡರು. ವಿರಾಟ್‌ ಕೊಹ್ಲಿ-ದೇವದತ್ತ ಪಡಿಕ್ಕಲ್‌ ಆರ್‌ಸಿಬಿಗೆ ಭರವಸೆಯ ಆರಂಭ ಒದಗಿಸಿದರು. ಪವರ್‌ ಪ್ಲೇಯಲ್ಲಿ ರನ್‌ ಸರಾಗವಾಗಿ ಹರಿದು ಬರತೊಡಗಿತು. ಮೊದಲ ವಿಕೆಟಿಗೆ 5.1 ಓವರ್‌ಗಳಿಂದ 49 ರನ್‌ ಒಟ್ಟುಗೂಡಿತು. ಆಗ ಫ‌ರ್ಗ್ಯುಸನ್‌ ಎಡಗೈ ಆಟಗಾರ ಪಡಿಕ್ಕಲ್‌ ಅವರನ್ನು ಬೌಲ್ಡ್‌ ಮಾಡಿ ಕೆಕೆಆರ್‌ಗೆ ಮೊದಲ ಯಶಸ್ಸು ತಂದಿತ್ತರು. ಪಡಿಕ್ಕಲ್‌ ಗಳಿಕೆ 18 ಎಸೆತಗಳಿಂದ 21 ರನ್‌ (2 ಬೌಂಡರಿ).

ನಾರಾಯಣ್‌ ತಮ್ಮ ದ್ವಿತೀಯ ಓವರ್‌ನಲ್ಲಿ ದೊಡ್ಡದೊಂದು ಬೇಟೆಯಾಡಿ ಕಪ್ತಾನ ಕೊಹ್ಲಿ ಅವರನ್ನು ಬೌಲ್ಡ್‌ ಮಾಡಿದರು. ಕೊಹ್ಲಿ ಗಳಿಕೆ 33 ಎಸೆತಗಳಿಂದ 39 ರನ್‌ (5 ಬೌಂಡರಿ). ಎಬಿಡಿ ವೈಫ‌ಲ್ಯ ಮತ್ತೆ ಮುಂದುವರಿಯಿತು (11). ನಾರಾಯಣ್‌ ಅವರ ಆಫ್-ಬ್ರೇಕ್‌ ಎಸೆತವೊಂದು ಡಿ ವಿಲಿಯರ್ ಅವರನ್ನು ವಂಚಿಸಿತು. ಅವರು ಬೌಲ್ಡ್‌ ಆಗಿ ನಿರ್ಗಮಿಸಿದರು.

ಡೆತ್‌ ಓವರ್‌ನಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮ್ಯಾಜಿಕ್‌ ಮಾಡುವುದು ಅನಿವಾರ್ಯವಾಗಿತ್ತು. ಆದರೆ ನಾರಾಯಣ್‌ ಇದಕ್ಕೂ ಅವಕಾಶ ಕೊಡಲಿಲ್ಲ. ತಮ್ಮ ಅಂತಿಮ ಓವರ್‌ನಲ್ಲಿ ಈ ಬಹುಮೂಲ್ಯ ವಿಕೆಟ್‌ ಉಡಾಯಿಸಿದರು.

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು- 7 ವಿಕೆಟಿಗೆ 138
ಕೋಲ್ಕತಾ ನೈಟ್‌ ರೈಡರ್- 19.4 ಓವರ್‌ಗಳಲ್ಲಿ 6 ವಿಕೆಟಿಗೆ 139.