ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ಫ್ರಾಂಚೈಸಿ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಕನ್ನಡ ಪರ ಸಂಘಟನೆಗಳು ಮತ್ತು ಆರ್ಸಿಬಿ(rcb) ಅಭಿಮಾನಿಗಳು ವಿರೋಧ ವ್ಯಕ್ತಪಡಿಸುತ್ತಿರುವಾಗಲೇ ಬೆಂಗಳೂರು ಬುಲ್ಸ್(Bengaluru Bulls) ತಂಡ ಆರ್ಸಿಬಿಗೆ ಟಾಂಗ್ ಕೊಟ್ಟಿದೆ. ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ‘ನೋಡ್ರಪ್ಪ, ನಮ್ಮ ಬೆಂಗಳೂರು ಬುಲ್ಸ್ ಪೇಜ್ ಕನ್ನಡದಲ್ಲಿ ಮಾತ್ರ’ ಎಂದು ಟ್ವೀಟ್ ಮಾಡಿದೆ.
ಬೆಂಗಳೂರು ಬುಲ್ಸ್ ತಂಡ ಈ ಹಿಂದಿನಿಂದಲೂ ಪಂದ್ಯಗಳ ಮತ್ತು ಆಟಗಾರರ ಸಾಧನೆ ಕುರಿತ ಮಾಹಿತಿಯನ್ನು ಕನ್ನಡದಲ್ಲೇ ಹಂಚಿಕೊಳ್ಳುತ್ತಿದೆ. ಈ ಮೂಲಕ ಕನ್ನಡ ಸಂಸ್ಕೃತಿ ಮತ್ತು ಭಾಷೆಯನ್ನು ಗೌರವಿಸುತ್ತಿದೆ. ಆದರೆ ಆರ್ಸಿಬಿ ಹಿಂದಿ ಭಾಷೆಯ ಎಕ್ಸ್ ಖಾತೆ ತೆರೆದು ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸ್ವತಃ ಅಭಿಮಾನಿಗಳೇ ಫ್ರಾಂಚೈಸಿ ವಿರುದ್ಧ ತಿರುಗಿಬಿದ್ದಿದ್ದಾರೆ. ಆದರೂ ಕೂಡ ಆರ್ಸಿಬಿ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ತೆಲುಗು , ಮಲಯಾಳಿ, ಪಂಜಾಬಿ ಮತ್ತು ಬೆಂಗಾಲಿ ಭಾಷೆಯಲ್ಲೂ ಖಾತೆ ತೆರೆದು ಪೋಸ್ಟ್ ಮಾಡುವುದಾಗಿ ಹೇಳಿದೆ. ಈ ಮೂಲಕ ಭಾರತ ಮತ್ತು ವಿಶ್ವದ ಪ್ರತಿ ಮೂಲೆಯಲ್ಲಿರುವ ಅಭಿಮಾನಿಗಳನ್ನು ತಲುಪಲು ಪ್ರಯತ್ನಿಸುವುದಾಗಿ ತಿಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಐಪಿಎಲ್ ತಂಡಗಳಲ್ಲಿ ಆರ್ಸಿಬಿ ಕೂಡ ಒಂದಾಗಿದೆ. ಹೀಗಾಗಿ ವಿವಿಧ ಭಾರತೀಯ ಭಾಷೆಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಡಬ್ ಮಾಡಲಾದ ವಿಡಿಯೋಗಳನ್ನು ಪೋಸ್ಟ್ ಮಾಡುವುದು ತನ್ನ ಗುರಿಯಾಗಿದೆ ಎಂದು ಆರ್ಸಿಬಿ ತಿಳಿಸಿದೆ. ಆದರೆ ಕನ್ನಡ ಪರ ಸಂಘಟನೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಬೆಂಗಳೂರು ಬುಲ್ಸ್ ಪ್ರಸಕ್ತ ಸಾಗುತ್ತಿರುವ 11ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇನ್ನು 8 ತಂಡಗಳು ಬಾಕಿ ಉಳಿದಿವೆ. ಈ ಎಲ್ಲ ಪಂದ್ಯ ಗೆದ್ದು ಪವಾಡವೊಂದು ಸಂಭವಿಸಿದರೆ ತಂಡ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆ ಇದೆ. ಇಂದು ರಾತ್ರಿ ನಡೆಯುವ ಪಂದ್ಯದಲ್ಲಿ ಪಾಟ್ನಾ ವಿರುದ್ಧ ಬುಲ್ಸ್ ಕಣಕ್ಕಿಳಿಯಲಿದೆ.