Friday, 13th December 2024

SMAT 2025: ಆರ್‌ಸಿಬಿ ಸ್ಟಾರ್‌ ರಜತ್‌ ಪಾಟಿದಾರ್‌ ಫಿಫ್ಟಿ, ಫೈನಲ್‌ಗೇರಿದ ಮಧ್ಯ ಪ್ರದೇಶ!

RCB's Star Rajat Patidar Slams Fifty Vs Delhi For Madhya Pradesh And Qualified Into Final Of Syed Mushtaq Ali Trophy

ಬೆಂಗಳೂರು: ಶುಕ್ರವಾರ ರಾತ್ರಿ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT 2025) ಟಿ20 ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಮಾಜಿ ಚಾಂಪಿಯನ್ ದಿಲ್ಲಿ ವಿರುದ್ಧ 7ವಿಕೆಟ್‌ಗಳ ಗೆಲುವು ಪಡೆಯುವ ಮೂಲಕ ಮಧ್ಯಪ್ರದೇಶ ತಂಡ 13 ವರ್ಷಗಳ ನಂತರ ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮಧ್ಯಪ್ರದೇಶ ತಂಡದ ನಾಯಕ ರಜತ್ ಪಾಟಿದಾರ್ ಅವರ ಅಜೇಯ ಅರ್ಧಶತಕ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಮೊದಲು ಬ್ಯಾಟ್ ಮಾಡಿದ್ದ ದಿಲ್ಲಿ, ಕೇವಲ 146 ರನ್‌ಗಳನ್ನು ಕಲೆ ಹಾಕಿತ್ತು. 147 ರನ್‌ ಗುರಿ ಹಿಂಬಾಲಿಸಿದ ಮಧ್ಯಪ್ರದೇಶ ಇನ್ನೂ 32 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಗಡಿ ದಾಟಿತು.

ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದ ನಾಯಕ ರಜತ್‌ ಪಾಟಿದಾರ್‌ ಅವರ ನಿರ್ಧಾರವನ್ನು ಮಧ್ಯಪ್ರದೇಶದ ಬೌಲರ್‌ಗಳು ಬೆಂಬಲಿಸಿದರು. ಶಿಸ್ತುಬದ್ದ ಬೌಲಿಂಗ್‌ ದಾಳಿ ನಡೆದಿದ್ದ ಎಂಪಿ ಬೌಲರ್‌ಗಳು ಎದುರಾಳಿ ದಿಲ್ಲಿ ತಂಡವನ್ನು ಐದು ವಿಕೆಟ್‌ಗೆ 146 ರನ್‌ಗಳ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು. ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ 12 ರನ್ ನೀಡಿ ಎರಡು ವಿಕೆಟ್ ಪಡೆದರು.

ಇದಾದ ಬಳಿಕ ನಾಯಕ ರಜಯ್‌ ಪಾಟಿದಾರ್ ಅವರು 29 ಎಸೆತಗಳಲ್ಲಿ ಅಜೇಯ 66 ರನ್ ಗಳಿಸಿದರು ಹಾಗೂ ಇವರ ಸ್ಪೋಟಕ ಅರ್ಧಶತಕದ ಬಲದಿಂದ ಮಧ್ಯ ಪ್ರದೇಶ ತಂಡ ಗುರಿಯನ್ನು ಕೇವಲ 15.4 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ತಲುಪಿತು. ಪಾಟಿದಾರ್ ಅವರ ಇನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಆರು ಸಿಕ್ಸರ್‌ಗಳು ಸೇರಿವೆ.

ಫೈನಲ್‌ನಲ್ಲಿ ಮುಂಬೈ-ಮಧ್ಯ ಪ್ರದೇಶ ನಡುವೆ ಕಾದಾಟ

ಹರ್‌ಪ್ರೀತ್ ಸಿಂಗ್ ಭಾಟಿಯಾ (ಔಟಾಗದೆ 46) ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 57 ಎಸೆತಗಳಲ್ಲಿ 106 ರನ್‌ಗಳ ಮುರಿಯದ ಜೊತೆಯಾಟವನ್ನು ಮಾಡುವ ಮೂಲಕ ರಜತ್ ಪಾಟಿದರ್ ದಿಲ್ಲಿಯ ಕಮ್‌ಬ್ಯಾಕ್‌ ಅವಕಾಶವನ್ನು ಮುಚ್ಚಿದರು. ಸುಯಾಶ್‌ ಶರ್ಮಾ ಎಸೆತದಲ್ಲಿ ಗೆಲುವಿನ ಸಿಕ್ಸರ್ ಬಾರಿಸಿದ ಹರ್‌ಪ್ರೀತ್ ಅವರ ಅಜೇಯ ಇನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಸೇರಿವೆ. ಆರಂಭಿಕರಾದ ಹರ್ಷ್ ಗಾವ್ಲಿ ಕೂಡ ಮಧ್ಯಪ್ರದೇಶಕ್ಕೆ 30 ರನ್ ಕೊಡುಗೆ ನೀಡಿದ್ದರು. 2011ರಲ್ಲಿ ರನ್ನರ್ ಅಪ್ ಆಗಿದ್ದ ಮಧ್ಯಪ್ರದೇಶ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಮುಂಬೈ ಸವಾಲನ್ನು ಎದುರಿಸಲಿದೆ.

ದಿಲ್ಲಿ ತಂಡದ ಬ್ಯಾಟಿಂಗ್‌ ವೈಫಲ್ಯ

ಯಶ್ ಧುಲ್ (11) ಮತ್ತು ಪ್ರಿಯಾಂಶ್ ಆರ್ಯ (29)33 ಎಸೆತಗಳಲ್ಲಿ 38 ರನ್‌ಗಳ ಜೊತೆಯಾಟದೊಂದಿಗೆ ದಿಲ್ಲಿ ತಂಡಕ್ಕೆ ಆರಂಭ ನೀಡಿದ್ದರು. ಆದಾಗ್ಯೂ, ಇಬ್ಬರೂ ಕ್ರಮವಾಗಿ ತ್ರಿಪುರೇಶ್ ಸಿಂಗ್ (18ಕ್ಕೆ 1) ಮತ್ತು ಕುಮಾರ್ ಕಾರ್ತಿಕೇಯ (23ಕ್ಕೆ 1) ಅವರಿಗೆ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ತಂಡದ ಸ್ಕೋರ್ ಒಂಬತ್ತು ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 54 ರನ್‌ಗಳನ್ನು ಕಲೆ ಹಾಕಿತ್ತು. ವೆಂಕಟೇಶ್‌ ಅಯ್ಯರ್ ಮೂರು ಎಸೆತಗಳ ಅಂತರದಲ್ಲಿ ನಾಯಕ ಆಯುಷ್ ಬದೋನಿ (19) ಮತ್ತು ಹಿಮ್ಮತ್ ಸಿಂಗ್ (15) ಅವರನ್ನು ಔಟ್ ಮಾಡಿ ದಿಲ್ಲಿಯ ರನ್‌ಗಳನ್ನು ಐದು ವಿಕೆಟ್‌ಗೆ 79 ಕ್ಕೆ ಕಟ್ಟಿ ಹಾಕಿದ್ದರು. ಇದಾದ ಬಳಿಕ ಅನುಜ್ ರಾವತ್ 24 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 33 ರನ್ ಗಳಿಸಿದರೆ, ಮಯಾಂಕ್ ರಾವತ್ 21 ಎಸೆತಗಳಲ್ಲಿ 24 ರನ್ ನೀಡಿ ಡೆಲ್ಲಿ ತಂಡವನ್ನು 146 ರನ್ ಗಳಿಗೆ ತಲುಪಿಸಿದ್ದರು.

ಈ ಸುದ್ದಿಯನ್ನು ಓದಿ:ಸಯ್ಯದ್‌ ಮುಷ್ತಾಕ್‌ ಟೂರ್ನಿ; ಮುಂಬೈ ತಂಡ ಸೇರಿದ ‌‌‌‌‌‌‌‌ಸೂರ್ಯಕುಮಾರ್‌, ದುಬೆ