Friday, 13th December 2024

Richa Ghosh: ದ್ವಿತೀಯ ಪಿಯುಸಿ ಪರೀಕ್ಷೆ; ಕಿವೀಸ್‌ ಸರಣಿಗೆ ರಿಚಾ ಘೋಷ್‌ ಅಲಭ್ಯ

ನವದೆಹಲಿ: ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಲೀಗ್‌ ಹಂತದಲ್ಲೇ ಮುಗ್ಗರಿಸಿದ ಭಾರತ ಮಹಿಳಾ ತಂಡ ನ್ಯೂಜಿಲ್ಯಾಂಡ್‌(New Zealand) ವಿರುದ್ಧ ತವರಿನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲು ಸಜ್ಜಾಗಿದೆ. ಈ ಸರಣಿಗೆ ಬಿಸಿಸಿಐ ಗುರುವಾರ ತಂಡವನ್ನು ಪ್ರಕಟಿಸಿತ್ತು. ಯುವ ವಿಕೆಟ್‌ ಕೀಪರ್‌ ರಿಚಾ ಘೋಷ್‌(Richa Ghosh) ಅವರನ್ನು ಈ ಸರಣಿಯಿಂದ ಕೈಬಿಡಲಾಗಿತ್ತು. ಅವರು ಸರಣಿಯಿಂದ ಹೊರಗುಳಿಯಲು ಪ್ರಮುಖ ಕಾರಣ 12ನೇ ತರಗತಿ ಬೋರ್ಡ್‌ ಎಕ್ಸಾಮ್‌. ಹೌದು ರಿಚಾ ಅವರು 12ನೇ ತರಗತಿ ಪರೀಕ್ಷೆ ಬರೆಯಲಿದ್ದಾರೆ. ಹೀಗಾಗಿ ಈ ಸರಣಿಯನ್ನು ತಪ್ಪಿಸಿಕೊಂಡಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ರಿಚಾ ನಿರೀಕ್ಷಿತ ಪ್ರದರ್ಶನ ತೋರ್ಪಡಿಸುವಲ್ಲಿ ವಿಫಲರಾಗಿದ್ದರು.

ರಿಚಾ ಘೋಷ್‌ ಅವರು 2022ರಲ್ಲಿ ನ್ಯೂಜಿಲ್ಯಾಂಡ್‌ನಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಏಕದಿನ ಕ್ರಿಕೆಟ್‌ನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ಭಾರತದ ಮಹಿಳಾ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು.

ವೇಗಿ ಪೂಜಾ ವಸ್ತ್ರಾಕರ್‌ಗೂ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಗಾಯದಿಂದ ಬಳಲುತ್ತಿರುವ ಆಶಾ ಶೋಭನಾ ಕೂಡ ಅಲಭ್ಯರಾಗಿದ್ದಾರೆ. ವಿಶ್ವಕಪ್‌ ಕಳಪೆ ಪ್ರದರ್ಶನ ತೋರಿದ ಕಾರಣ ನಾಯಕತ್ವ ಕಳೆದುಕೊಳ್ಳು ಭೀತಿಯಲ್ಲಿದ್ದ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಿವೀಸ್‌ ಸರಣಿಯಲ್ಲಿ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ಸದ್ಯ ನ್ಯೂಜಿಲ್ಯಾಂಡ್‌ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ.

ಇದನ್ನೂ ಓದಿ IND vs NZ: 46 ರನ್‌ಗೆ ಭಾರತ ಸರ್ವಪತನ

ತಂಡ

ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮತಿ ಮಂಧನಾ, ಶಫಾಲಿ ವರ್ಮ, ಡಿ. ಹೇಮಲತಾ, ದೀಪ್ತಿ ಶರ್ಮ, ಜೆಮಿಮಾ ರೋಡ್ರಿಗಸ್‌, ಯಾಸ್ತಿಕಾ ಭಾಟಿಯಾ, ಉಮಾ ಚೇತ್ರಿ, ಸಯಾಲಿ ಸತ್ಗರೆ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್‌ ಠಾಕೂರ್‌, ತೇಜಲ್‌ ಹಸಬಿ°ಸ್‌, ಸೈಮಾ ಠಾಕೂರ್‌, ಪ್ರಿಯಾ ಮಿಶ್ರಾ, ರಾಧಾ ಯಾದವ್‌, ಶ್ರೇಯಾಂಕಾ ಪಾಟೀಲ್‌.

ಡಬ್ಲ್ಯುಪಿಎಲ್‌ ರೀಟೈನ್‌ ಪಟ್ಟಿ ಸಲ್ಲಿಕೆ ಗಡುವು ವಿಸ್ತರಣೆ

ಮುಂದಿನ ವರ್ಷ ನಡೆಯುವ ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌(WPL 2025) (ಡಬ್ಲ್ಯುಪಿಎಲ್‌) ಆಟಗಾರ್ತಿಯರ ರೀಟೈನ್‌ ಪಟ್ಟಿ(wpl 2025 retention) ಸಲ್ಲಿಸುವ ದಿನಾಂಕವನ್ನು ಬಿಸಿಸಿಐ ಮತ್ತಷ್ಟು ವಿಸ್ತರಿಸಿದೆ. ಫ್ರಾಂಚೈಸಿಗಳಿಗೆ ನವೆಂಬರ್‌ 7ರ ಗಡುವು ನೀಡಿದೆ. ಈ ಮೊದಲು ಅಕ್ಟೋಬರ್‌ 15ರ ಗಡುವು ನೀಡಿತ್ತು. ರಿಟೈನ್‌ ಪಟ್ಟಿ ಸಲ್ಲಿಕೆ ಬಳಿಕ ಮಿನಿ ಹರಾಜು ದಿನಾಂಕವನ್ನು ಬಿಸಿಸಿಐ ಪ್ರಕಟಿಸಲಿದೆ. ಮಿನಿ ಹರಾಜಿನ ಪರ್ಸ್‌ ಮೊತ್ತ 15 ಕೋಟಿ ಆಗಿದೆ.