Monday, 9th December 2024

Rohit Sharma: ರೋಹಿತ್‌ ದ್ವಿಶತಕದ ವಿಶ್ವ ದಾಖಲೆಗೆ 10 ವರ್ಷ

ಮುಂಬಯಿ: ಟೀಮ್‌ ಇಂಡಿಯಾದ ನಾಯಕ, ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌ ಶರ್ಮ(Rohit Sharma) ಅವರು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸರ್ವಾಧಿಕ ರನ್ನುಗಳ ವಿಶ್ವದಾಖಲೆ(Rohit Sharma hits 264) ನಿರ್ಮಿಸಿದ ದಿನವಿದು. ಅವರ 10 ವರ್ಷಗಳ ಹಿಂದಿನ ಪರಾಕ್ರಮ ಇಂದಿಗೂ ವಿಶ್ವದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿಯೇ ಉಳಿದಿದೆ.

ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಸಲ 200 ರನ್‌ ಬಾರಿಸಿದ ಹಿರಿಮೆ ಹೊಂದಿರುವವರು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌. ಬಳಿಕ ವೀರೇಂದ್ರ ಸೆಹವಾಗ್‌, ರೋಹಿತ್‌ ಶರ್ಮ ಈ ಹಾದಿಯಲ್ಲಿ ಸಾಗಿ ಬರುತ್ತಾರೆ. ಇವರಲ್ಲಿ ರೋಹಿತ್‌ ಏಕದಿನದಲ್ಲಿ ಒಂದಕ್ಕಿಂತ ಹೆಚ್ಚು ದ್ವಿಶತಕ ಬಾರಿಸಿದ ವಿಶ್ವದ ಏಕೈಕ ಸಾಧಕನೆಂಬುದು ವಿಶೇಷ.

2013ರಲ್ಲಿ ಆಸ್ಟ್ರೇಲಿಯ ವಿರುದ್ಧ ಬೆಂಗಳೂರು ಪಂದ್ಯದಲ್ಲಿ 209 ರನ್‌ ಬಾರಿಸಿದ ರೋಹಿತ್‌ ಶರ್ಮ, ಮರು ವರ್ಷವೇ ಅಂದರೆ 2014ರಲ್ಲಿ ಪ್ರವಾಸಿ ಶ್ರೀಲಂಕಾ ಎದುರು ಈಡನ್‌ ಗಾರ್ಡ್‌ನ್ಸ್‌ನಲ್ಲಿ 264 ರನ್ನುಗಳ ವಿಶ್ವದಾಖಲೆಯ ಇನ್ನಿಂಗ್ಸ್‌ ಕಟ್ಟುತ್ತಾರೆ. ಅವರ ಪಾಲಿಗೆ ಇದೊಂದು ಅದೃಷ್ಟದ ಸಾಧನೆ. ಕೇವಲ 4 ರನ್‌ ಮಾಡಿದ್ದಾಗ ತಿಸರ ಪೆರೆರ ನೀಡಿದ ಜೀವದಾನ ಎನ್ನುವುದು ರೋಹಿತ್‌ ಅವರನ್ನು 264ರ ತನಕ ಬೆಳೆಸಿತ್ತು!

ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್‌ ನಡೆಸಿದ ರೋಹಿತ್‌ ಸರಿಯಾಗಿ 100 ಎಸೆತಗಳಲ್ಲಿ ಶತಕ ದಾಖಲಿಸುತ್ತಾರೆ. ಮುಂದಿನ 51 ಎಸೆತಗಳಲ್ಲಿ ಡಬಲ್‌ ಸೆಂಚುರಿ ಪೂರ್ತಿಗೊಳ್ಳುತ್ತದೆ. ಆಗಲೇ 46ನೇ ಓವರ್‌ ಜಾರಿಯಲ್ಲಿದ್ದ ಕಾರಣ ರೋಹಿತ್‌ಗೆ ಇನ್ನು ಹೆಚ್ಚು ರನ್‌ ಗಳಿಸಲಾಗದು ಎಂಬುದೇ ಎಲ್ಲರ ನಿರೀಕ್ಷೆ ಆಗಿತ್ತು. ಆದರೆ ಮುಂದಿನ 22 ಎಸೆತಗಳಲ್ಲಿ ಅವರು ಸಿಡಿದು ನಿಂತ ಪರಿ ಅಸಾಮಾನ್ಯ. ಈ ಕಿರು ಅವಧಿಯಲ್ಲಿ 9 ಬೌಂಡರಿ, 3 ಸಿಕ್ಸರ್‌ ಬಾರಿಸಿ ಮೊತ್ತವನ್ನು 264ಕ್ಕೆ ಏರಿಸಿದರು. ಒಟ್ಟು 173 ಎಸೆತ ಎದುರಿಸಿದ ರೋಹಿತ್‌ 33 ಫೋರ್‌, 9 ಸಿಕ್ಸರ್‌ಗಳ ಅಮೋಘ ಇನ್ನಿಂಗ್ಸ್‌ ಒಂದನ್ನು ಕಟ್ಟಿ ವಿಶ್ವ ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಮೂಡಿಸಿದ್ದರು. 2017ರಲ್ಲಿ ಶ್ರೀಲಂಕಾ ವಿರುದ್ಧವೇ ಅವರು ಮೊಹಾಲಿಯಲ್ಲಿ ಮತ್ತೂಂದು ದ್ವಿಶತಕ ಬಾರಿಸಿ ಮೆರೆದುದನ್ನು ಮರೆಯುವಂತಿಲ್ಲ. ಒಟ್ಟು ಮೂರು ದ್ವಿಶತಕ ಬಾರಿಸಿದ ಸಾಧನೆ ರೋಹಿತ್‌ ಹೆಸರಿನಲ್ಲಿದೆ.

ಇದನ್ನೂ ಓದಿ IND vs AUS: ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಫಾರ್ಮ್‌ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಚೇತನ್‌ ಶರ್ಮಾ!