Friday, 13th December 2024

ರೂಟ್ ಶತಕ, ಸಿಬ್ಲೆ ಅರ್ಧಶತಕ: ಪ್ರವಾಸಿಗರ ಮೇಲುಗೈ

ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ದಿನ ಆರಂಭಿಕ ಆಘಾತಕ್ಕೊಳಗಾದರೂ, ಇಂಗ್ಲೆಂಡ್ ತಂಡ ಡೊಮಿನಿಕ್ ಸಿಬ್ಲೆ ಅರ್ಧಶತಕ ನಾಯಕ ಜೋ ರೂಟ್ ಅವರ ಶತಕದ ನೆರವಿನಿಂದ ಮೇಲುಗೈ ಸಾಧಿಸಿದೆ.

ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಇಂಗ್ಲೆಂಡ್ ಪರ ಇನ್ನಿಂಗ್ಸ್ ಆರಂಭಿಸಿದ್ದ ರೋನಿ ಬರ್ನ್ಸ್ ಮತ್ತು ಡೊಮಿನಿಕ್ ಸಿಬ್ಲೆ ಜೋಡಿ ತಂಡಕ್ಕೆ ಅರ್ಧಶತಕದ ಜೊತೆಯಾಟ ಆಡಿ ಉತ್ತಮ ಆರಂಭ ನೀಡಿದರು. ತಂಡದ ಮೊತ್ತ 63 ರನ್ ಗಳಾಗಿದ್ದ ವೇಳೆ 33 ರನ್ ಗಳಿಸಿದ್ದ ರೋನಿ ಬರ್ನ್ಸ್ ಅಶ್ವಿನ್ ಬೌಲಿಂಗ್ ನಲ್ಲಿ ಪಂತ್ ಗೆ ಕ್ಯಾಚ್ ನೀಡಿ ಔಟಾದರು.

ಡೇನಿಯಲ್ ಲಾರೆನ್ಸ್ ರನ್ನು ಬುಮ್ರಾ ಎಲ್ ಬಿ ಬಲೆಗೆ ಕೆಡವಿದರು. ಈ ಹಂತದಲ್ಲಿ ಕ್ರೀಸ್ ಗೆ ಆಗಮಿಸಿದ ನಾಯಕ ಜೊ ರೂಟ್ , ಡೊಮಿನಿಕ್ ಸಿಬ್ಲೆ ಜೊತೆ ಗೂಡಿ ರಕ್ಷಣಾತ್ಮಕ ಆಟವಾಡಿದರು.

ಡೊಮಿನಿಕ್ ಸಿಬ್ಲೆ ಅಜೇಯ 85 ರನ್ ಗಳಿಸಿದ್ದು, ಜೋ ರೂಟ್ ಶತಕ (116) ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ಇಂಗ್ಲೆಂಡ್ ತಂಡ 2 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿದೆ. ದಿನದಾಟ ಮುಕ್ತಾಯಕ್ಕೆ 34 ಓವರ್ ಗಳು ಮಾತ್ರ ಬಾಕಿ ಇದ್ದು, ಅಂತಿಮ ಹಂತದಲ್ಲಿ ವಿಕೆಟ್ ಕಳೆದುಕೊಳ್ಳದೇ ಇರಲು ಇಂಗ್ಲೆಂಡ್ ತಂಡ ರಕ್ಷಣಾತ್ಮಕ ಆಟದ ಮೊರೆ ಹೋಗಿದೆ.