ಕರಾಚಿ: ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ(Champions Trophy) ಪಂದ್ಯಾವಳಿಗೆ ಭಾರತ ತಂಡವನ್ನು ಪಾಕ್‌ಗೆ ಕಳುಹಿಸಲು ನಿರಾಕರಿಸುತ್ತಿರುವ ಬಿಸಿಸಿಐ ವಿರುದ್ಧ ಪಾಕ್ ಮಾಜಿ ನಾಯಕ ಶಾಹೀದ್ ಅಫ್ರಿದಿ(Shahid Afridi) ಕಿಡಿ ಕಾರಿದ್ದಾರೆ.
ಟ್ವಿಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಶಾಹೀದ್ ಅಫ್ರಿದಿ, ʼಕ್ರಿಕೆಟ್ ಎನ್ನುವುದು ಎರಡು ದೇಶಗಳನ್ನು ಒಟ್ಟುಗೂಡಿಸುವ ಕ್ರೀಡೆ. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಆಟವು ನಮ್ಮನ್ನು ಒಂದುಗೂಡಿಸುವ ಸಮಯ ಇದಾಗಿದೆ. ಇತಿಹಾಸದಿಂದ ವಿಭಜಿಸಲ್ಪಟ್ಟ ದೇಶಗಳು ಒಲಂಪಿಕ್ ಉತ್ಸಾಹದಲ್ಲಿ ಒಗ್ಗೂಡಬಹುದಾದರೆ, ನಾವು ಕ್ರಿಕೆಟ್‌ಗಾಗಿ ಮತ್ತು ಚಾಂಪಿಯನ್ಸ್ ಟ್ರೋಫಿಗಾಗಿ ಏಕೆ ಒಂದಾಗಬಾರದು? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ Champions Trophy: ಚಾಂಪಿಯನ್ಸ್ ಟ್ರೋಫಿ ಆತಿಥ್ಯ ಕೈ ತಪ್ಪಿದರೆ ಪಾಕ್‌ಗೆ 548 ಕೋಟಿ ರೂ. ನಷ್ಟ
ʼಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳುವ ಎಲ್ಲ ತಂಡವನ್ನು ಪಾಕಿಸ್ತಾನದಲ್ಲಿ ನೋಡಲು ನಾವು ಬಯಸುತ್ತೇವೆ. ನಮ್ಮ ಆತಿಥ್ಯದಿಂದ ಎಲ್ಲ ತಂಡಗಳಿಗೂ ಮರೆಯಲಾಗದ ನೆನಪುಗಳು ಸಿಗಲಿದೆ. ಅತಿಯಾದ ಅಹಂ ಒಳ್ಳೆಯದಲ್ಲʼ ಎಂದು ಬರೆದುಕೊಳ್ಳುವ ಮೂಲಕ ಬಿಸಿಸಿಐಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಫ್ರಿದಿ, ಪಾಕಿಸ್ಥಾನದಲ್ಲಿ ಭಾರತ ತಂಡ ಕ್ರಿಕೆಟ್ ಆಡಬೇಕೆಂಬ ನಮ್ಮ ಮನವಿಗೆ ಭಾರತದಿಂದ ಸಕಾರಾತ್ಮಕ ಉತ್ತರ ಬರುತ್ತದೆ ಎಂದು ನನಗನಿಸುವುದಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಒಬ್ಬ ವ್ಯಕ್ತಿಯಿಂದ ಹಾಳಾಗಿದೆ ಎಂದ ಅವರು ಉಭಯ ದೇಶಗಳು ಜನರು ಪರಸ್ಪರ ಸಂಚರಿಸಲು ಬಯಸುತ್ತಾರೆ. ಆದರೆ ಮೋದಿ ಏನನ್ನು ಮಾಡಲು ಹೊರಟಿದ್ದಾರೆ ಎಂದು ಅರ್ಥವಾಗುವುದಿಲ್ಲ ಎಂದು ಅಫ್ರಿದಿ ವಾಗ್ದಾಳಿ ನಡೆಸಿದ್ದರು.
ಚಾಂಪಿಯನ್ಸ್ ಟ್ರೋಫಿ ದಕ್ಷಿಣ ಆಫ್ರಿಕಾಗೆ ಶಿಫ್ಟ್?
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವ ಬಗ್ಗೆ ಖಚಿತಪಡಿಸುವಂತೆ ಪಿಸಿಬಿಗೆ ಐಸಿಸಿ ಪತ್ರ ಬರೆದಿದೆ ಎಂದು ಪಿಟಿಐ ವರದಿ ಮಾಡಿದೆ. ಒಂದು ವೇಳೆ ಹೈಬ್ರಿಡ್ ಮಾದರಿಯನ್ನು ಪಿಸಿಬಿ ಸ್ವೀಕರಿಸಿಲ್ಲವಾದರೆ, ಸಂಪೂರ್ಣ ಟೂರ್ನಿಯನ್ನು ದಕ್ಷಿಣ ಆಫ್ರಿಕಾಗೆ ಐಸಿಸಿ ಸ್ಥಳಾಂತರಿಸಬಹುದು. ಈ ಬಗ್ಗೆ ಇನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಆದರೆ, ವರದಿಗಳ ಪ್ರಕಾರ ಈ ಬಗ್ಗೆ ಪಿಸಿಬಿ, ಪಾಕಿಸ್ತಾನ ಸರ್ಕಾರದ ಬಳಿ ಈ ಬಗ್ಗೆ ಚರ್ಚೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.