Saturday, 14th December 2024

Shannon Gabriel: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ವಿಂಡೀಸ್‌ ವೇಗಿ

Shannon Gabriel

ಗಯಾನ: ವೆಸ್ಟ್ ಇಂಡೀಸ್ ತಂಡದ ವೇಗದ ಬೌಲರ್(West Indies pacer) ಶಾನನ್ ಗೇಬ್ರಿಯಲ್(Shannon Gabriel) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ 12 ವರ್ಷಗಳ ವೃತ್ತಿಜೀವನವನ್ನು ಮುಕ್ತಾಯಗೊಳಿಸಿದ್ದಾರೆ.

36 ವರ್ಷ ವರ್ಷದ ಗೇಬ್ರಿಯಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ನಿವೃತ್ತಿಯನ್ನು ಪ್ರಕಟಿಸಿದರು. ʼಕಳೆದ 12 ವರ್ಷಗಳ ಕಾಲ ವೆಸ್ಟ್ ಇಂಡೀಸ್ ತಂಡದ ಪರ ಆಡಲು ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟ. ನನ್ನ ಈ ಕ್ರಿಕೆಟ್‌ ಜರ್ನಿಯಲ್ಲಿ ಸಹಕರಿಸಿದ ತಂಡದ ಸಹ ಆಟಗಾರರು, ಸಿಬ್ಬಂದಿ ವರ್ಗ, ಕೋಚ್‌ ಹಾಗೂ ಕುಟುಂಬ ಸದಸ್ಯರಿಗೆ ಧನ್ಯವಾದ ತಿಳಿಸುತ್ತೇನೆʼ ಎಂದು ಶಾನನ್ ಗೇಬ್ರಿಯಲ್ ಬರೆದುಕೊಂಡಿದ್ದಾರೆ.

2012 ರಲ್ಲಿ ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್‌ನಲ್ಲಿ ಆಡುವ ಮೂಲಕ ಗೇಬ್ರಿಯಲ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ಆರಂಭಿಸಿದ್ದರು. ವಿಂಡೀಸ್‌ ಪರ  59 ಪಂದ್ಯಗಳನ್ನು ಆಡಿ 166 ವಿಕೆಟ್‌ ಕಡೆವಿದ್ದಾರೆ. ಏಕದಿನದಲ್ಲಿ 25 ಪಂದ್ಯಗಳಿಂದ 33 ವಿಕೆಟ್‌, 2 ಟಿ20 ಪಂದ್ಯಗಳನ್ನಾಡಿ 3 ವಿಕೆಟ್‌ ಪಡೆದಿದ್ದಾರೆ. 2023 ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಭಾರತದ ವಿರುದ್ಧದ ಟೆಸ್ಟ್‌ ಪಂದ್ಯ ಗೇಬ್ರಿಯಲ್ ಅವರ ಕೊನೆಯ ಟೆಸ್ಟ್ ಪಂದ್ಯವಾಗಿತ್ತು. ಇದಾದ ಬಳಿಕ ಅವರು ತಂಡದಲ್ಲಿ ಅವಕಾಶ ಪಡೆಯಲು ವಿಫಲರಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೊಂದಿದರೂ ಗ್ರೇಬಿಯಲ್‌ ಕೆರೆಬಿಯನ್‌ ಲೀಗ್‌ನಲ್ಲಿ ತಮ್ಮ ಆಟ ಮುಂದುವರಿಸುವುದಾಗಿ ಹೇಳಿದ್ದಾರೆ.

ಗೇಬ್ರಿಯಲ್ ಆಟದಿಂದ ಮಾತ್ರವಲ್ಲದೆ ವಿವಾದದಿಂದಲೂ ಸುದ್ದಿಯಾಗಿದ್ದರು. ಇಂಗ್ಲೆಂಡ್‌ ತಂಡದ  ಸ್ಟಾರ್ ಬ್ಯಾಟರ್ ಜೋ ರೂಟ್ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಕಾರಣಕ್ಕೆ ಅವರನ್ನು 2019ರಲ್ಲಿ ನಾಲ್ಕು ಏಕದಿನ ಪಂದ್ಯಗಳಿಂದ ನಿಷೇಧಿಸಲಾಗಿತ್ತು.