Wednesday, 11th December 2024

ಶಾರ್ದೂಲ್‌-ವಾಷಿಂಗ್ಟನ್ ’ಟ್ರಬಲ್‌ ಶೂಟರ್’ ಆಟ

ಬ್ರಿಸ್ಬೇನ್‌:  ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪಾಲಿಗೆ ವೇಗಿ ಶಾರ್ದೂಲ್ ಠಾಕೂರ್‌ ಹಾಗೂ ಆಲ್ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಟ್ರಬಲ್‌ ಶೂಟರ್‌ಗಳಾದರು.

ಆಸೀಸ್‌ತಂಡದ 369 ರನ್ನುಗಳ ಉತ್ತರವಾಗಿ, ರನ್‌ ಗತಿ ಏರಿಸುವ ಸಲುವಾಗಿಯೇ ಹೊಡೆಬಡಿಯ ಹಾಗೂ ರಕ್ಷಣಾತ್ಮಕ ಆಟಕ್ಕಿಳಿದ ಭಾರತದ ಅಗ್ರ ಕ್ರಮಾಂಕದಲ್ಲಿ ಯಾವುದೇ ಅರ್ಧಶತಕ ಮೂಡಿ ಬರಲಿಲ್ಲ. ತಮ್ಮಿಂದಾದ ರನ್‌ ಕಾಣಿಕೆ ಸಲ್ಲಿಸಿ ಪೆವಿಲಿಯನ್‌ ಪರೇಡ್‌ ನಡೆಸಿದರು. ಆರನೇ ಕ್ರಮಾಂಕದವರೆಗೂ ಯಾರೊಬ್ಬರು ದೀರ್ಘ ಇನ್ನಿಂಗ್ಸ್‌ ಬೆಳೆಸಲು ವಿಫಲರಾದರು.

ರವಿಚಂದ್ರನ್‌ ಅಶ್ವಿನ್‌ ಹಾಗೂ ರವೀಂದ್ರ ಜಡೇಜಾ ಅವರ ಕೊರತೆಯನ್ನು ಸಮರ್ಥವಾಗಿ ನೀಗಿಸಿದ ವಾಷಿಂಗ್ಟನ್‌ ಸುಂದರ್‌  ಹಾಗೂ ಶಾರ್ದೂಲ್‌ ಠಾಕೂರ್‌ ಕ್ರಮವಾಗಿ 50 ಮತ್ತು 55 ರನ್‌ ಗಳಿಸಿ, ಆತಿಥೇಯರಿಗೆ ಕಗ್ಗಂಟಾಗಿ ಪರಿಣಮಿಸಿದರು.

ಅಂದ ಹಾಗೆ ಸುಂದರ್‌ ಪಾಲಿಗೆ ಇದು ಪಾದಾರ್ಪಣಾ ಪಂದ್ಯ ಕೂಡ ಹೌದು. ಈ ಮೂಲಕ ಮೊದಲ ಟೆಸ್ಟ್‌ ಪಂದ್ಯವನ್ನು ಸ್ಮರಣೀಯವನ್ನಾಗಿಸಿಕೊಂಡರು. ವಾಷಿಂಗ್ಟನ್‌ ಸುಂದರ್‌ ಹಾಗೂ ಶಾರ್ದೂಲ್‌ ಠಾಕೂರ್‌ ಅವರ ಏಳನೇ ವಿಕೆಟ್‌ ಜತೆಯಾಟ ದಲ್ಲಿ ಈಗಾಗಲೇ 184 ಎಸೆತಗಳಲ್ಲಿ 106 ರನ್‌ ಹರಿದು ಬಂದಿವೆ.

ಆರಂಭಿಕ ರೋಹಿತ್‌ ಶರ್ಮಾ ಸರ್ವಾಧಿಕ 44 ಹೊಡೆದು ಔಟಾದರು. ಬಳಿಕ, ಚೇತೇಶ್ವರ ಪೂಜಾರ (25), ನಾಯಕ ಅಜಿಂಕ್ಯ ರಹಾನೆ ದೀರ್ಘ ಜತೆಯಾಟ ನೀಡದೆ, ಏಕದಿನ ಶೈಲಿಯಲ್ಲಿ ಬ್ಯಾಟ್‌ ಬೀಸಿ, ವಿಕೆಟ್‌ ಒಪ್ಪಿಸಿದರು. ಗಿಲ್‌ ಪ್ಯಾಟ್‌ ಕಮ್ಮಿನ್ಸ್ ಗೆ ಬಲಿಯಾದರು. ರೋಹಿತ್‌ ವಿಕೆ‌ಟ್‌ ಲಿಯೋನ್‌ ಪಾಲಾಯಿತು. ಚೇತೇಶ್ವರ ಪೂಜಾರ ಹ್ಯಾಜಲ್‌ವುಡ್‌ ಗೆ ವಿಕೆ‌ಟ್‌ ಒಪ್ಪಿಸಿದರು. ಅಂತಿಮವಾಗಿ ನಾಯಕ ರಹಾನೆ ಸ್ಟಾರ್ಕ್‌ ಮೋಡಿಗೆ ಒಳಗಾದರು.

ವನ್‌ ಡೌನ್‌ ಆಟಗಾರ ಮಾರ್ಕಸ್‌ ಲ್ಯಾಬುಶ್ಗನ್ನೆ ಇನ್ನಿಂಗ್ಸ್‌ನ ಏಕೈಕ ಶತಕ ಬಾರಿಸಿದರು. ನಾಯಕ ಟಿಮ್‌ ಪೇನ್‌ ಅರ್ಧಶತಕ ಬಾರಿಸಿ, ತಂಡದ ಮೊತ್ತ ಮುನ್ನೂರರ ಗಡಿ ದಾಟಿಸಿದರು. ಬಳಿಕ ಮಾಜಿ ನಾಯಕ ಸ್ಟೀವನ್‌ ಸ್ಮಿತ್‌(36), ಕೀಪರ್‌ ಬ್ಯಾಟ್ಸ್ಮನ್‌ ಮ್ಯಾಥ್ಯೂ ವೇಡ್‌(45), ಕ್ಯಾಮರೂನ್‌ ಗ್ರೀನ್‌ (47) ಮತ್ತು ಕೊನೆಯಲ್ಲಿ ವೇಗಿ ಸ್ಟಾರ್ಕ್‌ ಹಾಗೂ ಲಿಯೋನ್‌ ಏಕದಿನ ಶೈಲಿಯಲ್ಲಿ ಬ್ಯಾಟ್‌ ಬೀಸಿ ತಂಡದ ಮೊತ್ತವನ್ನು 350 ರ ಗಡಿ ದಾಟಿಸಿದರು.

ಟೆಸ್ಟ್‌ ಗೆ ಪಾದಾರ್ಪಣೆ ಮಾಡಿದ ಟಿ.ನಟರಾಜನ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ತಲಾ ಮೂರು ವಿಕೆ‌ಟ್‌ ಕಿತ್ತರು. ಶಾರ್ದೂಲ್‌ ಠಾಕೂರ್‌ ಸಹ ಮೂರು ವಿಕೆಟ್‌ ಕಿತ್ತು, ವಿಕೆಟ್‌ ಬೇಟೆಗೆ ಸಾಥ್‌ ನೀಡಿದರು. ಏಕೈಕ ವಿಕೆ‌ಟ್‌ ಸಿರಾಜ್‌ ಪಾಲಾಯಿತು.

ಅನನುಭವಿ ಬೌಲಿಂಗ್‌ ಪಡೆ ಘಾತಕ ಪ್ರದರ್ಶನ ನೀಡಿದರೂ, ಹಲವು ಕ್ಯಾಚುಗಳನ್ನು ಬಿಟ್ಟ ಕಾರಣ, ಆಸೀಸ್‌ ಸರಾಗವಾಗಿ ರನ್ ಪೇರಿಸಲು ಸಾಧ್ಯವಾಯಿತು. ಮುಖ್ಯವಾಗಿ ಲ್ಯಾಬುಶ್ಗನ್ನೆ ಕ್ಯಾಚನ್ನ ನಾಯಕ ರಹಾನೆ ಬಿಟ್ಟಿದ್ದು, ತಂಡಕ್ಕೆ ದುಬಾರಿಯಾಗಿತು. ಪರಿಣಾಮ, ಆಟಗಾರನಿಂದ ಶತಕ(108) ಹೊರಹೊಮ್ಮಿತ್ತು.

ಈಗಾಗಲೇ ಮೂರು ಟೆಸ್ಟ್’ಗಳಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯ ಗೆದ್ದು, ಮೂರನೇ ಟೆಸ್ಟ್‌ ಡ್ರಾ ಆಗಿದೆ.

ಸ್ಪೆಷಲ್‌ ನ್ಯೂಸ್‌: ಸ್ಪಿನ್‌ ಆಲ್ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಪಾದಾರ್ಪಣೆ ಮಾಡಿದ ಟೆಸ್ಟ್‌ ಪಂದ್ಯದಲ್ಲಿ ಅರ್ಧಶತಕ ಹಾಗೂ ಮೂರಕ್ಕಿಂತ ಅಧಿಕ ವಿಕೆಟ್‌ ಪಡೆದ ಭಾರತದ ಎರಡನೇ ಆಟಗಾರನಾಗಿ ಮೂಡಿ ಬಂದರು. ಇದಕ್ಕೂ ಮುನ್ನ ದತ್ತು ಪಡ್ಕರ್‌ (14/3 ಮತ್ತು 51 ರನ್‌) 1948/49ರಲ್ಲಿ ಸಿಡ್ನಿಯಲ್ಲಿ ಆಸೀಸ್‌ ವಿರುದ್ದ ಸಾಧನೆ ಮಾಡಿದ್ದರು.