Friday, 29th November 2024

Siddarth Kaul: ಕ್ರಿಕೆಟ್‌ಗೆ ವಿದಾಯ ಹೇಳಿದ ಆರ್‌ಸಿಬಿ ಮಾಜಿ ವೇಗಿ

ನವದೆಹಲಿ: ಟೀಮ್‌ ಇಂಡಿಯಾ ವೇಗಿ ಸಿದ್ದಾರ್ಥ್ ಕೌಲ್‌ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ(siddarth kaul retire Indian cricket). 2018-19ರ ಅವಧಿಯಲ್ಲಿ ಅವರು ಭಾರತ ಪರ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯ ಆಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿಯೂ ಆಡಿದ್ದರು. ಸಾಮಾಜಿಕ ಜಾಲತಾಣದ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿದರು.

‘ಭಾರತದಲ್ಲಿ ನನ್ನ ವೃತ್ತಿಜೀವನಕ್ಕೆ ತೆರೆ ಎಳೆಯುವ ಸಮಯ ಬಂದಿದೆ. ನನ್ನ ನಿವೃತ್ತಿಯನ್ನು ಘೋಷಿಸುತ್ತಿರುವೆ. ನಾನು ಇಷ್ಟು ಬೆಳೆಯಲು ಕಾರಣವಾದ ದೇವರಿಗೆ ಧನ್ಯವಾದಗಳು. ಅಭಿಮಾನಿಗಳ ಅಪರಿಮಿತ ಬೆಂಬಲ, ನನ್ನ ಪಾಲಕರು ಮತ್ತು ಕುಟುಂಬದ ಪ್ರೋತ್ಸಾಹಕ್ಕೆ ಚಿರಋಣಿಯಾಗಿರುವೆʼ ಎಂದು 34 ವರ್ಷದ ಸಿದ್ಧಾರ್ಥ್ ಎಕ್ಸ್‌ ಖಾತೆಯಲ್ಲಿ ಬರೆಯುವ ಮೂಲಕ ತಮ್ಮ ನಿವೃತ್ತಿಯನ್ನು ಪ್ರಕಟಿಸಿದರು.

ಇತ್ತೀಚೆಗೆ ರೋಹ್ಟಕ್‌ನಲ್ಲಿ ನಡೆದಿದ್ದ ಹರಿಯಾಣ ಮತ್ತು ಪಂಜಾಬ್ ನಡುವಣ ರಣಜಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಆಡಿದ್ದರು. ಅದು ಅವರ ವೃತ್ತಿಜೀವನದ ಕೊನೆಯ ಪಂದ್ಯವಾಗಿದೆ. ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ (155) ಪಡೆದ ಬೌಲರ್ ಎಂಬ ದಾಖಲೆಯೂ ಇವರ ಹೆಸರಿನಲ್ಲಿದ್ದಾರೆ.

2008ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಜಯಿಸಿದ್ದ ಭಾರತ ತಂಡದಲ್ಲಿ ಸಿದ್ಧಾರ್ಥ್ ಕೂಡ ಆಡಿದ್ದರು. ಅದೇ ತಂಡದಲ್ಲಿ ಆಗ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ ಅವರೂ ಆಡಿದ್ದರು. ಪಂಜಾಬ್‌ನವರಾದ ಸಿದ್ಧಾರ್ಥ್ ಅವರು ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್), ಕೋಲ್ಕತ್ತ ನೈಟ್ ರೈಡರ್ಸ್, ಸನ್‌ರೈಸರ್ಸ್‌ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. ಭಾರತೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ಕಾರಣ ಮುಂದೆ ಅವರಿಗಿಗೆ ಹೊರದೇಶಗಳ ಕ್ರಿಕೆಟ್‌ ಲೀಗ್‌ಗಳಲ್ಲಿ ಆಡುವ ಅವಕಾಶ ಪಡೆಯಬಹುದಾಗಿದೆ.

ಬಲಗೈ ವೇಗಿ ಸಿದ್ಧಾರ್ಥ್ ಅವರು 88 ಪ್ರಥಮ ದರ್ಜೆ ಪಂದ್ಯಗಳಲ್ಲಿ ಪಂಜಾಬ್ ತಂಡದಲ್ಲಿ ಆಡಿ 297 ವಿಕೆಟ್‌ಗಳನ್ನು ಗಳಿಸಿದ್ದಾರೆ. 111 ಲಿಸ್ಟ್ ಎ ಪಂದ್ಯಗಳಲ್ಲಿ 199 ವಿಕೆಟ್‌ಗಳು ಮತ್ತು ಟಿ20ಯಲ್ಲಿ 145 ಪಂದ್ಯಗಳಿಂದ 182 ವಿಕೆಟ್ ಗಳಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್‌ನಲ್ಲಿ 87 ಪಂದ್ಯಗಳಿಂದ 120 ವಿಕೆಟ್‌ ಗಳಿಸಿದ್ದಾರೆ.