Thursday, 12th December 2024

SMAT 2024: ಕೇವಲ 23 ಎಸೆತಗಳಲ್ಲಿ 77 ರನ್‌ ಸಿಡಿಸಿದ ಇಶಾನ್‌ ಕಿಶನ್‌!

SMAT 2024: Jharkhand’s Ishan Kishan smashes 23-ball 77 at former IPL team's home ground

ಹೊಸದಿಲ್ಲಿ: ಭಾರತ ತಂಡದಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡುತ್ತಿರುವ ವಿಕೆಟ್‌ ಕೀಪರ್‌ ಇಶಾನ್ ಕಿಶನ್‌ ಅರುಣಾಚಲ ಪ್ರದೇಶ ವಿರುದ್ದ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ (SMAT 2024) ಟೂರ್ನಿಯ ಪಂದ್ಯದಲ್ಲಿ ಕೇವಲ 23 ಎಸೆತಗಳಲ್ಲಿ 77 ರನ್‌ಗಳನ್ನು ಸಿಡಿಸಿದ್ದಾರೆ. ಆ ಮೂಲಕ ಜಾರ್ಖಂಡ್‌ ತಂಡದ 10 ವಿಕೆಟ್‌ಗಳ ಭರ್ಜರಿಗೆ ಗೆಲುವಿಗೆ ನೆರವು ನೀಡಿದ್ದಾರೆ.

ಅಂದ ಹಾಗೆ ಇತ್ತೀಚೆಗೆ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಮೆಗಾ ಹರಾಜಿನಲ್ಲಿಯೂ ಇಶಾನ್‌ ಕಿಶಾನ್‌ ದೊಡ್ಡ ಹಿನ್ನಡೆಯನ್ನು ಅನುಭವಿಸಿದ್ದರು. ಅವರನ್ನು ಮುಂಬೈ ಇಂಡಿಯನ್ಸ್‌ ತಂಡ ಉಳಿಸಿಕೊಳ್ಳಲಿಲ್ಲ. ಇದರ ಹೊರತಾಗಿಯೂ ಇಶಾನ್ ಕಿಶನ್ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ತನ್ನನ್ನು ತಾನು ಸಾಬೀತುಪಡಿಸಿಕೊಂಡಿದ್ದಾರೆ ಮತ್ತು ಆ ಮೂಲಕ ಪ್ರಸ್ತುತ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಾರ್ಖಂಡ್ ತಂಡದ ಇಶಾನ್ ಕಿಶನ್, ಅರುಣಾಚಲ ಪ್ರದೇಶದ ವಿರುದ್ಧ ಬಿರುಸಿನ ಬ್ಯಾಟಿಂಗ್‌ ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ಕೇವಲ 27 ಎಸೆತಗಳಲ್ಲಿ ಬರೋಬ್ಬರಿ 9 ಸಿಕ್ಸರ್‌ ಹಾಗೂ ಐದು ಬೌಂಡರಿಗಳೊಂದಿಗೆ ಅಜೇಯ 77 ರನ್‌ ಸಿಡಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಅವರ ಬ್ಯಾಟಿಂಗ್‌ ಆತ್ಮವಿಶ್ವಾಸವನ್ನು ತೋರಿಸುತ್ತದೆ ಆದರೆ ಅವರು ನಿರಂತರವಾಗಿ ತಮ್ಮ ಬ್ಯಾಟಿಂಗ್ ಅನ್ನು ಸುಧಾರಿಸಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತಿದೆ.

IPL 2025: ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್‌ ಆದ ಟಾಪ್‌ 5 ಆಟಗಾರರು!

ಇಶಾನ್ ಕಿಶನ್‌ಗೆ ಈ ಇನಿಂಗ್ಸ್‌ ತುಂಬಾ ಮಹತ್ವದ್ದಾಗಿತ್ತು, ಏಕೆಂದರೆ ಅವರು ತಮ್ಮನ್ನು ತಾವು ಸಾಬೀತುಪಡಿಸಲು ಸೂಕ್ತ ವೇದಿಕೆ ಬೇಕಿತ್ತು. ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಅವರು ಭಾರತೀಯ ಕ್ರಿಕೆಟ್ ತಂಡದ ಆಯ್ಕೆದಾರರಿಗೆ ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ಅವರು ಯಾವುದೇ ಒತ್ತಡದಲ್ಲಿ ರನ್ ಗಳಿಸುವುದು ಮಾತ್ರವಲ್ಲದೆ ತಂಡಕ್ಕೆ ಮ್ಯಾಚ್ ವಿನ್ನರ್ ಎಂದು ಸಾಬೀತುಪಡಿಸಿದ್ದಾರೆ.

ಇಶಾನ್ ಕಿಶನ್‌ಗೆ ಈ ಇನಿಂಗ್ಸ್ ಅಗತ್ಯ

ಈ ಅದ್ಭುತ ಇನಿಂಗ್ಸ್‌ ಬಳಿಕ ಇಶಾನ್ ಕಿಶನ್ ತಮ್ಮ ಕ್ರಿಕೆಟ್ ವೃತ್ತಿ ಜೀವನದ ಬಗ್ಗೆ ಹೊಸ ಪ್ರಶ್ನೆಗಳು ಎದ್ದಿವೆ. ಈ ಪ್ರದರ್ಶನದ ನಂತರ ಅವರಿಗೆ ಭಾರತ ತಂಡದಲ್ಲಿ ಮತ್ತೆ ಅವಕಾಶ ಸಿಗುತ್ತದೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ಆದರೆ, ಅವರು ಮುಂಬರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಆಡಲಿದ್ದಾರೆ ಹಾಗೂ ಈ ಟೂರ್ನಿಯಲ್ಲಿ ಅವರು ಉತ್ತಮ ಪ್ರದರ್ಶನ ತೋರಿದರೆ, ಭಾರತ ಟಿ20 ತಂಡಕ್ಕೆ ಮರಳುವ ಸಾಧ್ಯತೆ ಇರುತ್ತದೆ.

ಜಾರ್ಖಂಡ್‌ಗೆ 10 ವಿಕೆಟ್‌ಜಯ

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಅರುಣಾಚಲ ಪ್ರದೇಶ ತಂಡ ಅನುಕುಲ್‌ ರಾಯ್‌ ಹಾಗೂ ರವಿ ಕುಮಾರ್‌ ಯಾದವ್‌ ಬೌಲಿಂಗ್‌ ದಾಳಿಗೆ ನಲುಗಿ 20 ಓವರ್‌ಗಳನ್ನು ಮುಗಿಸಿದರೂ ಕೇವಲ 93 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿ ಹಿಂಬಾಲಿಸಿದ ಜಾರ್ಖಂಡ್‌ ತಂಡ, ಇಶಾನ್‌ ಕಿಶನ್‌ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಕೇವಲ 4.3 ಓವರ್‌ಗಳಿಗೆ ವಿಕೆಟ್‌ ನಷ್ಟವಿಲ್ಲದೆ 94 ರನ್‌ ಗಳಿಸಿ ಗೆಲುವು ಪಡೆಯಿತು.