Friday, 13th December 2024

SMAT 2025: ʻ8 ಪಂದ್ಯಗಳಿಂದ 432 ರನ್‌ʼ-ಭಾರತ ತಂಡಕ್ಕೆ ಅಜಿಂಕ್ಯ ರಹಾನೆ ಕಮ್‌ಬ್ಯಾಕ್‌ ಮಾಡ್ತಾರಾ?

SMAT 2025: Ajinkya Rahane Scored 432 Runs In 8 Matches in Syed Mushtaq Ali Trophy and Now Comeback Team India

ಬೆಂಗಳೂರು: ಭಾರತ ಕ್ರಿಕೆಟ್ ತಂಡಕ್ಕೆ ಪುನರಾಗಮನ ಮಾಡಲು ಯತ್ನಿಸುತ್ತಿರುವ ಟೀಮ್‌ ಇಂಡಿಯಾದ ಸ್ಟಾರ್ ಆಟಗಾರ ಅಜಿಂಕ್ಯ ರಹಾನೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ (SMAT 2025) ಭಾರಿ ಸದ್ದು ಮಾಡುತ್ತಿದ್ದಾರೆ. ಅದ್ಭುತ ಫಾರ್ಮ್‌ನಲ್ಲಿರುವ ರಹಾನೆ ಅವರ ದಿಟ್ಟ ಪ್ರದರ್ಶನದಿಂದಾಗಿ ಮುಂಬೈ ತಂಡ ಫೈನಲ್‌ಗೂ ಲಗ್ಗೆ ಇಟ್ಟಿದೆ. ಸೆಮಿಫೈನಲ್ ಪಂದ್ಯದಲ್ಲಿ ರಹಾನೆ ಮುಂಬೈ ಪರ 98 ರನ್‌ಗಳ ಸ್ಪೋಟಕ ಇನಿಂಗ್ಸ್‌ ಅನ್ನು ಆಡಿದ್ದಾರೆ. ಆದರೆ, ಕೇವಲ ಎರಡು ರನ್‌ಗಳಿಂದ ರಹಾನೆ ಶತಕ ವಂಚಿತರಾದರು. ದೇಶಿ ಟೂರ್ನಿಯ ಈ ಋತುವಿನಲ್ಲಿ ಶತಕದ ಸಮೀಪಕ್ಕೆ ಬಂದು ವಿಕೆಟ್‌ ಒಪ್ಪಿಸಿರುವುದು ಇದು ಮೂರನೇ ಸಲ!

ಈ ಟೂರ್ನಿಯಲ್ಲಿ ಅಜಿಂಕ್ಯಾ ರಹಾನೆಯ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಇದೀಗ ಅವರು ಮುಂಬೈ ಪರ ಒಟ್ಟು 8 ಪಂದ್ಯಗಳನ್ನು ಆಡಿದ್ದಾರೆ. ಈ 8 ಪಂದ್ಯಗಳಲ್ಲಿ ರಹಾನೆ 432 ರನ್ ಗಳಿಸಿದ್ದಾರೆ, ಇದರಲ್ಲಿ ಅವರ ಸ್ಟ್ರೈಕ್ ರೇಟ್ 170 ಕ್ಕಿಂತ ಹೆಚ್ಚು. ಅಷ್ಟೇ ಅಲ್ಲ, ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ 19 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಆ ಮೂಲಕ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಈ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.‌

ಅಜಿಂಕ್ಯ ರಹಾನೆ 2023ರ ಜುಲೈನಲ್ಲಿ ಭಾರತ ತಂಡದ ಪರ ಕೊನೆಯ ಬಾರಿ ಆಡಿದ್ದರು. ಕಳಪೆ ಫಾರ್ಮ್‌ನಿಂದಾಗಿ ಅವರನ್ನು ಭಾರತ ಟೆಸ್ಟ್‌ ತಂಡದಿಂದ ಕೈಬಿಡಲಾಗಿತ್ತು. ರಾಷ್ಟ್ರೀಯ ತಂಡದಿಂದ ಹೊರಗುಳಿದ ನಂತರ ರಹಾನೆ ದೇಶಿ ಕ್ರಿಕೆಟ್‌ನಲ್ಲಿ ನಿರಂತರವಾಗಿ ಬೆವರು ಹರಿಸುತ್ತಿದ್ದಾರೆ. ಆದರೆ, ಇದರ ಹೊರತಾಗಿಯೂ ಅವರು ಟೀಮ್‌ ಇಂಡಿಯಾಗೆ ಮರಳಲು ಸಾಧ್ಯವಾಗಿಲ್ಲ. ಆದರೆ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರಹಾನೆ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಬಿಸಿಸಿಐ ಆಯ್ಕೆಗಾರರ ​​ಗಮನ ಸೆಳೆದಿದ್ದಾರೆ.

ಫೈನಲ್‌ಗೆ ಲಗ್ಗೆ ಇಟ್ಟ ಮುಂಬೈ

ಶುಕ್ರವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯ ಮೊದಲನೇ ಸೆಮಿಫೈನಲ್‌ ಪಂದ್ಯದಲ್ಲಿ ಬರೋಡಾ ವಿರುದ್ಧ ಮುಂಬೈ ತಂಡ 6 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಬರೋಡಾ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 158 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಮುಂಬೈ, ಅಜಿಂಕ್ಯ ರಹಾನೆ (98 ರನ್)‌ ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ 17.2 ಓವರ್‌ಗಳಿಗೆ 164 ರನ್‌ ಗಳಿಸಿ ಗೆಲುವು ಪಡೆಯಿತು.

ಅಜಿಂಕ್ಯ ರಹಾನೆಯ ಅಂಕಿಅಂಶಗಳು

ಅಜಿಂಕ್ಯ ರಹಾನೆ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಜೀವನದ ಬಗ್ಗೆ ಹೇಳುವುದಾದರೆ ಅವರು ಟೀಮ್ ಇಂಡಿಯಾ ಪರ ಒಟ್ಟು 85 ಟೆಸ್ಟ್, 90 ಒಡಿಐ ಮತ್ತು 30 ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ 5077 ರನ್ ಗಳಿಸಿದ್ದಾರೆ. ಏಕದಿನದಲ್ಲಿ 2962 ರನ್ ಹಾಗೂ ಟಿ20ಯಲ್ಲಿ 375 ರನ್ ಗಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: SMAT 2025: ಆರ್‌ಸಿಬಿ ಸ್ಟಾರ್‌ ರಜತ್‌ ಪಾಟಿದಾರ್‌ ಫಿಫ್ಟಿ, ಫೈನಲ್‌ಗೇರಿದ ಮಧ್ಯ ಪ್ರದೇಶ!