ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 (SMAT 2025) ಟೂರ್ನಿಯಲ್ಲಿ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಮೊಹಮ್ಮದ್ ಶಮಿ ಮಿಂಚಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾಗೆ ತೆರಳುವ ಮುನ್ನ ತಾವು ಸಂಪೂರ್ಣ ಫಿಟ್ ಇರುವುದಾಗಿ ಟೀಮ್ ಇಂಡಿಯಾ ವೇಗಿ ಸಾಬೀತುಪಡಿಸಿದ್ದಾರೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಶಮಿ ಬ್ಯಾಟಿಂಗ್‌ನಲ್ಲಿ ಆರ್ಭಟಿಸಿದರು.
ಸೋಮವಾರ ನಡೆದಿದ್ದ ಮೊದಲನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಬಂಗಾಳ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 159 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಚಂಡೀಗಢ ತಂಡಕ್ಕೆ 160 ರನ್‌ಗಳ ಗುರಿಯನ್ನು ನೀಡಿತ್ತು. 10ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಮೊಹಮ್ಮದ್ ಶಮಿ ಸ್ಪೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನವನ್ನು ಸೆಳೆದರು.
ಡೆತ್ ಓವರ್‌ಗಳಲ್ಲಿ ಕ್ರೀಸ್‌ಗೆ ಬಂದ ಮೊಹಮ್ಮದ್ ಶಮಿ ಕೇವಲ 17 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿಗಳೊಂದಿಗೆ ಅಜೇಯ 32 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಬಂಗಾಳ ತಂಡ, ಎದುರಾಳಿ ಚಂಡೀಗಢ ತಂಡಕ್ಕೆ 160 ರನ್‌ಗಳ ಗುರಿಯನ್ನು ನೀಡಲು ನೆರವು ನೀಡಿದ್ದರು. ಅಂದ ಹಾಗೆ ಕೊನೆಯ ಓವರ್‌ನಲ್ಲಿ ಸಂದೀಪ್ ಶರ್ಮಾ ಅವರಿಗೆ ಶಮಿ ಎರಡು ಭರ್ಜರಿ ಸಿಕ್ಸರ್ ಸಿಡಿಸಿದ್ದು ಎಲ್ಲರ ಗಮನವನ್ನು ಸೆಳೆಯಿತು.
IND vs AUS: ಆಸ್ಟ್ರೇಲಿಯಾಗೆ ತೆರಳಲು ವೇಗಿ ಮೊಹಮ್ಮದ್ ಶಮಿ ಸಜ್ಜು! ವರದಿ
ಟಿ20 ಕ್ರಿಕೆಟ್‌ನಲ್ಲಿ ಮೊಹಮ್ಮದ್ ಶಮಿ ಅವರ ವೈಯಕ್ತಿಕ ಗರಿಷ್ಠ ಮೊತ್ತ ಇದಾಗಿದೆ. ಇದಕ್ಕೂ ಮುನ್ನ 21 ರನ್‌ಗಳು ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. 33 ರನ್‌ಗಳನ್ನು ಕಲೆ ಹಾಕಿದ ಕರಣ್ ಲಾಲ್ ಬಂಗಾಳ ತಂಡದ ಈ ಪಂದ್ಯದಲ್ಲಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಆಸ್ಟ್ರೇಲಿಯಾಗೆ ತೆರಳಿರುವ ಮೊಹಮ್ಮದ್ ಶಮಿ
ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರನ್ನು ಬಿಸಿಸಿಐ ವೈದ್ಯಕೀಯ ತಂಡ ನೋಡಿಕೊಳ್ಳುತ್ತಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳ ನಿಮಿತ್ತ ಮೊಹಮ್ಮದ್ ಶಮಿ ಆಸ್ಟ್ರೇಲಿಯಾಗೆ ಪ್ರವಾಸ ಮಾಡಲು ಸಜ್ಜಾಗುತ್ತಿದ್ದಾರೆ.
Mohammed Shami already into SRH mode 32(17) ⚒️🔥
— Harsha (@HarshaTarak8) December 9, 2024
pic.twitter.com/klno34cG1n
ಶಮಿ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದಿದು
ಎರಡನೇ ಟೆಸ್ಟ್ ಪಂದ್ಯದ ಸೋಲಿನ ಬಳಿಕ ಮಾತನಾಡಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಮೊಹಮ್ಮದ್ ಶಮಿ ಫಿಟ್ನೆಸ್ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
“ಈಗಾಗಲೇ ದೀರ್ಘಾವಧಿ ಸಮಯ ತೆಗೆದುಕೊಂಡಿರುವ ಕಾರಣ ಮೊಹಮ್ಮದ್ ಶಮಿ ಶೇ 100 ರಷ್ಟು ಫಿಟ್ ಆಗಬೇಕೆಂದು ನಾವು ಬಯಸುತ್ತೇವೆ. ತರಾತುರಿಯಲ್ಲಿ ಇಲ್ಲಿಗೆ ಬಂದು ಭಾರತ ತಂಡದ ಪರ ಆಡಬೇಕೆಂದು ನಾವು ಒತ್ತಡ ಹಾಕುವುದಿಲ್ಲ. ಕೆಲವೊಂದು ವೃತ್ತಿಪರ ನಿಯಮಗಳಿದ್ದು, ಅವುಗಳನ್ನು ನಾವು ಅನುಸರಿಸಬೇಕಾಗುತ್ತದೆ. ಆದರೆ, ಶಮಿ ಅವರನ್ನು ಪ್ರತಿಯೊಂದು ಪಂದ್ಯದಲ್ಲಿಯೂ ವೈದ್ಯಕೀಯ ತಂಡ ನೋಡಿಕೊಳ್ಳುತ್ತಿದೆ. ಅವರು ನಾಲ್ಕು ಓವರ್ ಬೌಲ್ ಮಾಡಿ, 20 ಓವರ್‌ಗಳವರೆಗೂ ಫೀಲ್ಡಿಂಗ್ ನಿಂತ ಬಳಿಕ ಅವರ ದೈಹಿಕ ಕ್ಷಮತೆ ಯಾವ ರೀತಿ ಇದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಆದರೆ. ಹಿರಿಯ ವೇಗಿಗೆ ಭಾರತ ತಂಡದ ಬಾಗಿಲು ಯಾವಾಗಲೂ ತೆರೆದಿರುತ್ತದೆ,” ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: IND vs AUS: ಫ್ಯಾನ್ಸ್‌ಗೆ ಸಿಹಿ ಸುದ್ದಿ, ರೋಹಿತ್ ಶರ್ಮಾ ಜತೆ ಆಸ್ಟ್ರೇಲಿಯಾಗೆ ಮೊಹಮ್ಮದ್ ಶಮಿ ಪಯಣ?