ಇದಕ್ಕೂ ಮುನ್ನ 2009 ಮತ್ತು 2014 ರಲ್ಲಿ ಸೆಮಿಫೈನಲ್ವರೆಗೆ ತಲುಪಿದ್ದು ದಕ್ಷಿಣ ಆಫ್ರಿಕಾ ತಂಡದ ಶ್ರೇಷ್ಠ ಸಾಧನೆಯಾಗಿತ್ತು. ಇದೀಗ ಚೊಚ್ಚಲ ಬಾರಿ ಫೈನಲ್ಗೆ ಎಂಟ್ರಿ ಕೊಟ್ಟಿದೆ.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಭರ್ಜರಿ ಜಯ ಸಾಧಿಸಿ ದಕ್ಷಿಣ ಆಫ್ರಿಕಾ ತಂಡ ಫೈನಲ್ಗೆ ಪ್ರವೇಶಿಸಿದೆ. ವಿಶ್ವಕಪ್ ಇತಿಹಾಸದಲ್ಲಿ ಇದು ದಕ್ಷಿಣ ಆಫ್ರಿಕಾ ತಂಡದ ಮೊದಲ ಸೆಮಿಫೈನಲ್ ಗೆಲುವು ಎಂಬುದು ವಿಶೇಷ. ಅಂದರೆ 1992 ರಿಂದ ವಿಶ್ವಕಪ್ನಲ್ಲಿ ಕಣಕ್ಕಿಳಿ ಯುತ್ತಿರುವ ಆಫ್ರಿಕನ್ನರು ಒಮ್ಮೆಯೂ ಫೈನಲ್ಗೆ ಪ್ರವೇಶಿಸಿರಲಿಲ್ಲ.
ಇದಕ್ಕೂ ಮುನ್ನ ಟ್ರಿನಿಡಾಡ್ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡದ ನಾಯಕ ರಶೀದ್ ಖಾನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಮೊದಲ ಓವರ್ನಿಂದಲೇ ಕರಾರುವಾಕ್ ದಾಳಿ ಸಂಘಟಿಸಿದ ಸೌತ್ ಆಫ್ರಿಕಾ ಬೌಲರ್ಗಳು ಆರಂಭ ದಲ್ಲೇ ಆಘಾತ ನೀಡುವಲ್ಲಿ ಯಶಸ್ವಿಯಾದರು.
ಮಾರ್ಕೊ ಯಾನ್ಸೆನ್ ಮೊದಲ ಓವರ್ನಲ್ಲೇ ರಹಮಾನುಲ್ಲಾ ಗುರ್ಬಾಝ್ (0) ವಿಕೆಟ್ ಪಡೆದರೆ, ಬಳಿಕ ಗುಲ್ಬದ್ದಿನ್ ನೈಬ್ (9) ಕ್ಲೀನ್ ಬೌಲ್ಡ್ ಆದರು. ಇನ್ನು ಇಬ್ರಾಹಿಂ ಝದ್ರಾನ್ (2) ರಬಾಡ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು.
ಇದರ ನಡುವೆ ಅಝ್ಮತುಲ್ಲಾ ಒಮರ್ಝಾಹಿ 10 ರನ್ಗಳಿಸಿದರೂ ಅನ್ರಿಕ್ ನೋಕಿಯಾ ಎಸೆತದಲ್ಲಿ ಔಟಾದರು. ಅನುಭವಿ ಬ್ಯಾಟರ್ ಮೊಹಮ್ಮದ್ ನಬಿ ಸೊನ್ನೆ ಸುತ್ತಿದರೆ, ನಂಗೆಯಾಲಿಯಾ ಖರೋಟೆ 2 ರನ್ಗಳಿಸಿ ಔಟಾದರು. ಪರಿಣಾಮ 23 ರನ್ ಕಲೆ ಹಾಕುವಷ್ಟರಲ್ಲಿ ಅಫ್ಘಾನಿಸ್ತಾನ್ ತಂಡವು 5 ವಿಕೆಟ್ ಕಳೆದುಕೊಂಡಿತು.
ಬಳಿಕ ಬಂದ ಕರೀಮ್ ಜನ್ನತ್ (8) ಮತ್ತು ರಶೀದ್ ಖಾನ್ (8) ಅಲ್ಪ ಹೊತ್ತು ಕ್ರೀಸ್ನಲ್ಲಿದ್ದರು. ಇವರಿಬ್ಬರ ಪತನದೊಂದಿಗೆ ಪೆವಿಲಿಯನ್ ಪರೇಡ್ ಮುಂದುವರೆಸಿದ ಅಫ್ಘಾನಿಸ್ತಾನ್ ತಂಡ 11.5 ಓವರ್ಗಳಲ್ಲಿ 56 ರನ್ಗಳಿಸಿ ಆಲೌಟ್ ಆಯಿತು.
ಸೌತ್ ಆಫ್ರಿಕಾ ಪರ ತಬ್ರೇಝ್ ಶಂಸಿ ಹಾಗೂ ಮಾರ್ಕೊ ಯಾನ್ಸೆನ್ ತಲಾ 3 ವಿಕೆಟ್ ಪಡೆದರೆ, ಕಗಿಸೊ ರಬಾಡ ಹಾಗೂ ಅನ್ರಿಕ್ ನೋಕಿಯಾ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
ಕೇವಲ 57 ರನ್ಗಳ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಫಝಲ್ಹಕ್ ಫಾರೂಖಿ ಎಸೆದ 2ನೇ ಓವರ್ನ 5ನೇ ಎಸೆತದಲ್ಲಿ ಕ್ವಿಂಟನ್ ಡಿಕಾಕ್ (5) ಕ್ಲೀನ್ ಬೌಲ್ಡ್ ಆದರು. ಈ ಹಂತದಲ್ಲಿ ಜೊತೆಗೂಡಿದ ರೀಝ ಹೆಂಡ್ರಿಕ್ಸ್ ಹಾಗೂ ಐಡೆನ್ ಮಾರ್ಕ್ರಾಮ್ ಜವಾಬ್ದಾರಿ ಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ 8.5 ಓವರ್ಗಳಲ್ಲಿ 57 ರನ್ಗಳ ಗುರಿ ಮುಟ್ಟುವ ಮೂಲಕ ಸೌತ್ ಆಫ್ರಿಕಾ ತಂಡವು 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ಸೌತ್ ಆಫ್ರಿಕಾ ತಂಡವು ಟಿ20 ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಫೈನಲ್ಗೆ ಪ್ರವೇಶಿಸಿದೆ.