ಕೋಲ್ಕತ್ತಾ: ರೋಚಕತೆಯಿಂದ ಕೂಡಿದ್ದ ಸನ್ರೈಸರ್ಸ್ ಹೈದರಾಬಾದ್ ಹಾಗೂ ಕಲ್ಕತ್ತಾ ನೈಟ್ರೈಡರ್ಸ್ ನಡುವಿನ ಪಂದ್ಯದಲ್ಲಿ ಕೆಕೆಆರ್ ತಂಡ ತಂಡವು 4 ರನ್ಗಳ ರೋಚಕ ಜಯ ಸಾಧಿಸಿತ್ತು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗಿ ಹರ್ಷಿತ್ ರಾಣಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಆದರೆ, ಪಂದ್ಯ ಮುಗಿದ ಬೆನ್ನಲ್ಲೇ ವೇಗಿಗೆ ಶಾಕ್ ಒಂದು ಎದುರಾಗಿದ್ದು, ಶೇ.60 ರಷ್ಟು ದಂಡ ವಿಧಿಸಲಾಗಿದೆ.
ತಮ್ಮ ಬಿಗಿ ಬೌಲಿಂಗ್ ದಾಳಿ ಮೂಲಕ ಕೆಕೆಆರ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹರ್ಷಿತ್ ರಾಣಾ ಮೈದಾನದಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇದರ ಬೆನ್ನಲ್ಲೇ ಅವರಿಗೆ ಪಂದ್ಯದ ಶೇ. 60ರಷ್ಟು ದಂಡ ವಿಧಿಸಲಾಗಿದೆ.
ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೆಕೆಆರ್ ವೇಗದ ಬೌಲರ್ ಹರ್ಷಿತ್ ರಾಣಾರನ್ನು ಟಾರ್ಗೆಟ್ ಮಾಡಿದ್ದ ಮಯಾಂಕ್ ಸಿಕ್ಸ್-ಫೋರ್ಗಳನ್ನು ಬಾರಿಸಿ ಉತ್ತಮ ಆರಂಭ ಒದಗಿಸಿದ್ದರು. ಇತ್ತ ಹರ್ಷಿಕ್ ರಾಣಾ ಕೂಡ ಮಾಯಾಂಕ್ ಅಗರ್ವಾಲ್ ವಿಕೆಟ್ಗಾಗಿ ಪರಿತಪಿಸುತ್ತಿದ್ದರು. ಅದರಂತೆ ರಾಣಾ ಎಸೆದ 6ನೇ ಓವರ್ನ ಮೂರನೇ ಎಸೆತವನ್ನು ಮಯಾಂಕ್ ಲೆಗ್ ಸೈಡ್ನತ್ತ ಬಾರಿಸಿದ್ದರು. ಆದರೆ ಅದಾಗಲೇ ಕ್ಯಾಚ್ಗಾಗಿ ಬೌಂಡರಿ ಲೈನ್ ಬಳಿ ಕಾದು ಕುಳಿತಿದ್ದ ರಿಂಕು ಸಿಂಗ್ ಚೆಂಡನ್ನು ಹಿಡಿದರು.
ಅಗರ್ವಾಲ್ ಅವರ ವಿಕೆಟ್ ಸಿಗುತ್ತಿದ್ದಂತೆ ಹರ್ಷಿತ್ ರಾಣಾ ಫ್ಲೈಯಿಂಗ್ ಕಿಸ್ ಕೊಡುವ ಮೂಲಕ ಬೀಳ್ಕೊಟ್ಟರು. ಇದರಿಂದ ಕುಪಿತಗೊಂಡ ಮಯಾಂಕ್ ಅಗರ್ವಾಲ್ ರಾಣಾರನ್ನು ಗುರಾಯಿಸಲಾರಂಭಿಸಿದರು. ಅಲ್ಲದೆ ಹರ್ಷಿತ್ ರಾಣಾರನ್ನು ದಿಟ್ಟಿಸುತ್ತಾ ಮಯಾಂಕ್ ಅಗರ್ವಾಲ್ ಪೆವಿಲಿಯನ್ನತ್ತ ಹೆಜ್ಜೆಹಾಕಿದರು. ಹಾಗೆಯೇ ಕೊನೆಯ ಓವರ್ನಲ್ಲಿ ಹೆನ್ರಿಕ್ ಕ್ಲಾಸೆನ್ ವಿಕೆಟ್ ಕಬಳಿಸಿದ ಬಳಿಕ ಪೆವಿಲಿಯನ್ಗೆ ದಾಟುವಂತೆ ಕೈ ಸನ್ನೆ ಮಾಡಿದ್ದರು. ಹೀಗೆ ಎರಡು ಬಾರಿ ಐಪಿಎಲ್ ನೀತಿ ಸಂಹಿತೆ ಯನ್ನು ಉಲ್ಲಂಘಿಸಿದ್ದಕ್ಕಾಗಿ ಹರ್ಷಿತ್ ರಾಣಾ ಅವರ ಒಟ್ಟು ಪಂದ್ಯ ಶುಲ್ಕದ ಮೇಲೆ ಶೇ.60 ರಷ್ಟು ದಂಡ ವಿಧಿಸಲಾಗಿದೆ.
ಈ ಪಂದ್ಯದಲ್ಲಿ 4 ಓವರ್ಗಳನ್ನು ಬೌಲಿಂಗ್ ಮಾಡಿದ್ದ ಹರ್ಷಿತ್ ಒಟ್ಟು 33 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಅದರಲ್ಲೂ ನಿರ್ಣಾಯಕವಾಗಿದ್ದ ಕೊನೆಯ ಓವರ್ನಲ್ಲಿ ಅದ್ಭುತ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದರು.
ಯಶಸ್ಸಿನ ಬೆನ್ನಲ್ಲೇ ಯುವ ವೇಗಿ ದಂಡದ ಶಿಕ್ಷೆಗೆ ಒಳಗಾಗಿದ್ದಾರೆ.