Saturday, 14th December 2024

4 ರನ್​ಗಳ ರೋಚಕ ಜಯ ಸಾಧಿಸಿದ ಕೆಕೆಆರ್​

ಕೋಲ್ಕತ್ತಾ: ರೋಚಕತೆಯಿಂದ ಕೂಡಿದ್ದ ಸನ್​ರೈಸರ್ಸ್​ ಹೈದರಾಬಾದ್​ ಹಾಗೂ ಕಲ್ಕತ್ತಾ ನೈಟ್​ರೈಡರ್ಸ್​ ನಡುವಿನ ಪಂದ್ಯದಲ್ಲಿ ಕೆಕೆಆರ್​ ತಂಡ ತಂಡವು 4 ರನ್​ಗಳ ರೋಚಕ ಜಯ ಸಾಧಿಸಿತ್ತು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗಿ ಹರ್ಷಿತ್ ರಾಣಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಆದರೆ, ಪಂದ್ಯ ಮುಗಿದ ಬೆನ್ನಲ್ಲೇ ವೇಗಿಗೆ ಶಾಕ್ ಒಂದು ಎದುರಾಗಿದ್ದು, ಶೇ.60 ರಷ್ಟು ದಂಡ ವಿಧಿಸಲಾಗಿದೆ.

ತಮ್ಮ ಬಿಗಿ ಬೌಲಿಂಗ್​ ದಾಳಿ ಮೂಲಕ ಕೆಕೆಆರ್​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹರ್ಷಿತ್​ ರಾಣಾ ಮೈದಾನದಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇದರ ಬೆನ್ನಲ್ಲೇ ಅವರಿಗೆ ಪಂದ್ಯದ ಶೇ. 60ರಷ್ಟು ದಂಡ ವಿಧಿಸಲಾಗಿದೆ.

ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೆಕೆಆರ್ ವೇಗದ ಬೌಲರ್ ಹರ್ಷಿತ್ ರಾಣಾರನ್ನು ಟಾರ್ಗೆಟ್ ಮಾಡಿದ್ದ ಮಯಾಂಕ್ ಸಿಕ್ಸ್-ಫೋರ್​ಗಳನ್ನು ಬಾರಿಸಿ ಉತ್ತಮ ಆರಂಭ ಒದಗಿಸಿದ್ದರು. ಇತ್ತ ಹರ್ಷಿಕ್ ರಾಣಾ ಕೂಡ ಮಾಯಾಂಕ್ ಅಗರ್ವಾಲ್ ವಿಕೆಟ್​ಗಾಗಿ ಪರಿತಪಿಸುತ್ತಿದ್ದರು. ಅದರಂತೆ ರಾಣಾ ಎಸೆದ 6ನೇ ಓವರ್​ನ ಮೂರನೇ ಎಸೆತವನ್ನು ಮಯಾಂಕ್ ಲೆಗ್​ ಸೈಡ್​ನತ್ತ ಬಾರಿಸಿದ್ದರು. ಆದರೆ ಅದಾಗಲೇ ಕ್ಯಾಚ್​ಗಾಗಿ ಬೌಂಡರಿ ಲೈನ್​ ಬಳಿ ಕಾದು ಕುಳಿತಿದ್ದ ರಿಂಕು ಸಿಂಗ್ ಚೆಂಡನ್ನು ಹಿಡಿದರು.

ಅಗರ್ವಾಲ್ ಅವರ ವಿಕೆಟ್​ ಸಿಗುತ್ತಿದ್ದಂತೆ ಹರ್ಷಿತ್ ರಾಣಾ ಫ್ಲೈಯಿಂಗ್ ಕಿಸ್ ಕೊಡುವ ಮೂಲಕ ಬೀಳ್ಕೊಟ್ಟರು. ಇದರಿಂದ ಕುಪಿತಗೊಂಡ ಮಯಾಂಕ್ ಅಗರ್ವಾಲ್ ರಾಣಾರನ್ನು ಗುರಾಯಿಸಲಾರಂಭಿಸಿದರು. ಅಲ್ಲದೆ ಹರ್ಷಿತ್ ರಾಣಾರನ್ನು ದಿಟ್ಟಿಸುತ್ತಾ ಮಯಾಂಕ್ ಅಗರ್ವಾಲ್ ಪೆವಿಲಿಯನ್​ನತ್ತ ಹೆಜ್ಜೆಹಾಕಿದರು. ಹಾಗೆಯೇ ಕೊನೆಯ ಓವರ್​ನಲ್ಲಿ ಹೆನ್ರಿಕ್ ಕ್ಲಾಸೆನ್ ವಿಕೆಟ್ ಕಬಳಿಸಿದ ಬಳಿಕ ಪೆವಿಲಿಯನ್​ಗೆ ದಾಟುವಂತೆ ಕೈ ಸನ್ನೆ ಮಾಡಿದ್ದರು. ಹೀಗೆ ಎರಡು ಬಾರಿ ಐಪಿಎಲ್ ನೀತಿ ಸಂಹಿತೆ ಯನ್ನು ಉಲ್ಲಂಘಿಸಿದ್ದಕ್ಕಾಗಿ ಹರ್ಷಿತ್ ರಾಣಾ ಅವರ ಒಟ್ಟು ಪಂದ್ಯ ಶುಲ್ಕದ ಮೇಲೆ ಶೇ.60 ರಷ್ಟು ದಂಡ ವಿಧಿಸಲಾಗಿದೆ.

ಈ ಪಂದ್ಯದಲ್ಲಿ 4 ಓವರ್​ಗಳನ್ನು ಬೌಲಿಂಗ್ ಮಾಡಿದ್ದ ಹರ್ಷಿತ್ ಒಟ್ಟು 33 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಅದರಲ್ಲೂ ನಿರ್ಣಾಯಕವಾಗಿದ್ದ ಕೊನೆಯ ಓವರ್​ನಲ್ಲಿ ಅದ್ಭುತ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದರು.

ಯಶಸ್ಸಿನ ಬೆನ್ನಲ್ಲೇ ಯುವ ವೇಗಿ ದಂಡದ ಶಿಕ್ಷೆಗೆ ಒಳಗಾಗಿದ್ದಾರೆ.