Friday, 13th December 2024

ವೇಳಾಪಟ್ಟಿ ಬದಲಾವಣೆ: ಜು.17ರಿಂದ ಶ್ರೀಲಂಕಾ-ಭಾರತ ಸರಣಿ ಆರಂಭ

ಕೊಲಂಬೊ: ಇಂಗ್ಲೆಂಡ್ ಪ್ರವಾಸದಿಂದ ಮರಳಿದ ಶ್ರೀಲಂಕಾ ತಂಡದ ಇಬ್ಬರು ಸದಸ್ಯರು ಕರೋನಾ ಸೋಂಕಿತರಾಗಿರುವ ಹಿನ್ನೆಲೆಯಲ್ಲಿ ಭಾರತ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯು ಜುಲೈ 17ಕ್ಕೆ ಮುಂದೂಡಿಕೆಯಾಗಿದೆ. ಈ ಬೆಳವಣಿಗೆಯನ್ನು ಬಿಸಿಸಿಐ ಖಚಿತಪಡಿಸಿದೆ. ಸರಣಿ ಜುಲೈ 13ರಂದು ಆರಂಭ ವಾಗಬೇಕಾಗಿತ್ತು.

ಮೂರು ಏಕದಿನ ಪಂದ್ಯಗಳು ಜುಲೈ 13, 16, 18ರ ಬದಲಾಗಿ ಜುಲೈ 17, 19 ಮತ್ತು 21ರಂದು ನಡೆದರೆ, ಟಿ20 ಪಂದ್ಯಗಳು ಜುಲೈ 21, 23, 25ರ ಬದಲಾಗಿ ಜುಲೈ 24, 25, 27ರಂದು ನಡೆಯಲಿವೆ. ಇದರಿಂದಾಗಿ ಶಿಖರ್ ಧವನ್ ಬಳಗ ಶ್ರೀಲಂಕಾದಲ್ಲಿ ಜುಲೈ 25ರ ಬದಲಾಗಿ 27ರವರೆಗೆ ಆಡಬೇಕಾಗುತ್ತದೆ.

ತಂಡದ ಇಬ್ಬರು ಸದಸ್ಯರಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿರುವುದರಿಂದ ಆಟಗಾರರು ಹೆಚ್ಚುವರಿ ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕಾಗಿದೆ. ಹೀಗಾಗಿ ಸರಣಿ ವೇಳಾಪಟ್ಟಿ ಬದಲಾವಣೆಗಾಗಿ ಲಂಕಾ ಮಂಡಳಿ, ಬಿಸಿಸಿಐಗೆ ಮನವಿ ಸಲ್ಲಿಸಿತ್ತು.

ಲಂಕಾ ತಂಡದ ಬ್ಯಾಟಿಂಗ್ ಕೋಚ್ ಗ್ರಾಂಟ್ ್ಲವರ್ ಹಾಗೂ ಡೇಟಾ ವಿಶ್ಲೇಷಕ ಜಿ.ಟಿ.ನಿರೊಶಾನ್‌ಗೆ ರೂಪಾಂತರಿ ಡೆಲ್ಟಾ ವೈರಸ್ ಕಾಣಿಸಿಕೊಂಡಿದೆ. ಇದರಿಂದಾಗಿ ತಂಡದ ಎಲ್ಲ ಸದಸ್ಯರು 2 ದಿನ ಹೆಚ್ಚುವರಿಯಾಗಿ ಕ್ವಾರಂಟೈನ್‌ನಲ್ಲಿ ಕಳೆದುಕೊಳ್ಳಬೇಕಾಗಿದೆ. ಇಂಗ್ಲೆಂಡ್‌ನಿಂದ ತವರಿಗೆ ಆಗಮಿಸಿದ ಎಲ್ಲ ಆಟಗಾರರನ್ನು 2 ಗುಂಪುಗಳಾಗಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ತಿಳಿಸಿದೆ. ಕಳೆದ ಭಾನುವಾರ ಬ್ರಿಸ್ಟಲ್‌ನಲ್ಲಿ ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಿನ 3ನೇ ಏಕದಿನ ಪಂದ್ಯ ನಡೆದಿತ್ತು.