Wednesday, 11th December 2024

ಲಂಕಾ ತಂಡಕ್ಕೆ ಏಷ್ಯಾ ಕಪ್ ಕಿರೀಟ

ದುಬೈ: ಲಂಕಾ ತಂಡ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 23 ರನ್‌ಗಳಿಂದ ಜಯಗಳಿಸಿದೆ. ಇದರೊಂದಿಗೆ ಶ್ರೀಲಂಕಾ ತಂಡ 6ನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್ ಪಟ್ಟಕ್ಕೇರಿದೆ.

ದುಬೈನಲ್ಲಿ ನಡೆದ ಈ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದಾಸುನ್ ಶನಕಾ ತಂಡವು ಪಾಕಿಸ್ತಾನಕ್ಕೆ 171 ರನ್‌ಗಳ ಗುರಿ ನೀಡಿತ್ತು. ಇದಕ್ಕೆ ಪ್ರತಿಯಾಗಿ ಬಾಬರ್ ಅಜಮ್ ನೇತೃತ್ವದ ಇಡೀ ತಂಡ ಕೇವಲ 147 ರನ್‌ಗಳಿಗೆ ಆಲೌಟ್ ಆಯಿತು.

ಶ್ರೀಲಂಕಾ, ಆತಿಥೇಯರಾಗಿದ್ದರೂ ತನ್ನ ತಾಯ್ನಾಡಿನಲ್ಲಿ ಪಂದ್ಯಾವಳಿಯನ್ನು ಆಯೋಜಿಸುವುದನ್ನು ಮುಂದೂಡ ಬೇಕಾ ಯಿತು. ಏಷ್ಯಾಕಪ್​ ಅನ್ನು ಯುಎಇಗೆ ಸ್ಥಳಾಂತರಿಸಲಾಯಿತು.

ಆಡಿದ ಮೊದಲ ಪಂದ್ಯದಲ್ಲೇ ಅಫ್ಘಾನಿಸ್ತಾನದ ವಿರುದ್ಧ ಹೀನಾಯವಾಗಿ ಸೋತಿದ್ದ ಲಂಕಾ ಇದಾದ ಬಳಿಕ ದಿಟ್ಟವಾಗಿ ತಿರುಗೇಟು ನೀಡಿ ಸತತ 5 ಪಂದ್ಯಗಳನ್ನು ಗೆದ್ದು ಪ್ರಶಸ್ತಿ ಗೆದ್ದುಕೊಂಡಿತು.

ಪಾಕಿಸ್ತಾನದ ನಾಯಕ ಟಾಸ್ ಗೆದ್ದು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ತಂಡದಲ್ಲಿ ಎರಡು ಬದಲಾವಣೆ ಮಾಡಿದ ಪಾಕ್, ಹಸನ್ ಅಲಿ ಮತ್ತು ಉಸ್ಮಾನ್ ಖಾದಿರ್ ಬದಲಿಗೆ ಶಾದಾಬ್ ಖಾನ್ ಮತ್ತು ನಸೀಮ್ ಶಾಗೆ ತಂಡ ದಲ್ಲಿ ಅವಕಾಶ ನೀಡಿದ್ದರು.

ಫೈನಲ್‌ನಲ್ಲಿ ಆರಂಭದಲ್ಲೇ ಲಯ ಕಳೆದುಕೊಂಡರೂ ಬೇಗನೇ ತಿರುಗೇಟು ನೀಡಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಕೇವಲ 58 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಅಲ್ಲಿಂದ 20 ಓವರ್‌ಗಳ ಅಂತ್ಯಕ್ಕೆ ಲಂಕಾ ತಂಡ 6 ವಿಕೆಟ್​ ನಷ್ಟಕ್ಕೆ 170 ರನ್ ಗಳಿಸಿತು. ತಂಡದ ಈ ಬೃಹತ್​ ಟಾರ್ಗೆಟ್‌ ನಲ್ಲಿ ಭಾನುಕ ರಾಜಪಕ್ಷ ದೊಡ್ಡ ಪಾತ್ರವನ್ನು ವಹಿಸಿ 45 ಎಸೆತಗಳಲ್ಲಿ 71 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಇನ್ನಿಂಗ್ಸ್​ನಲ್ಲಿ 6 ಬೌಂಡರಿ ಮತ್ತು 3 ಬೌಂಡರಿ ಕೂಡ ಸೇರಿದ್ದವು.

ಹಸರಂಗ ಕೇವಲ 21 ಎಸೆತಗಳಲ್ಲಿ 36 ರನ್ ಗಳಿಸಿದರು. ಪಾಕಿಸ್ತಾನ ಪರ ಹ್ಯಾರಿಸ್ ರೌಫ್ ಗರಿಷ್ಠ 3 ವಿಕೆಟ್ ಪಡೆದರು. ಅದೇ ವೇಳೆ ಶಾದಾಬ್ ಖಾನ್, ನಸೀಮ್ ಶಾ ಮತ್ತು ಇಫ್ತಿಕರ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.

171 ರನ್ ಟಾರ್ಗೆಟ್ ಪಡೆದ ಪಾಕಿಸ್ತಾನಕ್ಕೆ ಮೊದಲ ಓವರ್​ನಲ್ಲೇ ಪ್ರಮೋದ್ ಮಧುಶನ್ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಿತ್ತು ಆಘಾತ ನೀಡಿದರು. ಎರಡನೇ ಎಸೆತದಲ್ಲಿ ಪಾಕ್ ನಾಯಕ ಬಾಬರ್ ಅಜಮ್ ಅವರ ವಿಕೆಟ್ ಕಬಳಿಸಿದರೆ, ಮುಂದಿನ ಎಸೆತದಲ್ಲಿ ಫಖರ್ ಜಮಾನ್ ವಿಕೆಟ್ ತೆಗೆಯುವ ಮೂಲಕ ಪಾಕಿಸ್ತಾನಕ್ಕೆ ದೊಡ್ಡ ಪೆಟ್ಟು ನೀಡಿದರು. ಹೀಗಾಗಿ ಪವರ್ ಪ್ಲೇನಲ್ಲಿ ಪಾಕಿಸ್ತಾನ 37 ರನ್‌ಗಳಿಗೆ 2 ವಿಕೆಟ್ ಕಳೆದು ಕೊಂಡಿತು.

ಹೀಗಾಗಿ ಮೊದಲ 10 ಓವರ್‌ಗಳಲ್ಲಿ ಪಾಕಿಸ್ತಾನ 68 ರನ್​ಗಳಿಗೆ 2 ವಿಕೆಟ್ ಕಳೆದು ಕೊಂಡಿತ್ತು. ಆದರೆ 14ನೇ ಓವರ್​ನಲ್ಲಿ ಮಧುಶನ್ ದಾಳಿ ನಡೆಸಿ, ಇಫ್ತಿಕರ್ ವಿಕೆಟ್ ಪಡೆದರು. ಇಫ್ತಿಕರ್ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿ, 31 ಎಸೆತಗಳಲ್ಲಿ 32 ರನ್ ಗಳಿಸಿ ಔಟಾದರು. ಆದರೆ ಅಗತ್ಯ ರನ್ ರೇಟ್ ಹೆಚ್ಚಿದ್ದರಿಂದ ಪಾಕಿಸ್ತಾನ ಒತ್ತಡಕ್ಕೆ ಸಿಲುಕಿತು. ಹೀಗಾಗಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಮೊಹಮ್ಮದ್ ರಿಜ್ವಾನ್, ಚಮಿಕಾ ಕರುಣಾರತ್ನ ಎಸೆತದಲ್ಲಿ ಬಲಿಯಾದರು. ಅಂತ್ಯದಲ್ಲಿ ರನ್‌ಗಳ ಒತ್ತಡದಲ್ಲಿ ಪಾಕ್ ತಂಡ ಬೇಗ ವಿಕೆಟ್ ಕಳೆದುಕೊಂಡಿತು.