Monday, 9th December 2024

ಸೂಪರ್ ಹೀರೋ ತೆವಾಟಿಯ ಸಿಕ್ಸರ್: ಟೈಟಾನ್ಸ್ ಗೆ ಗೆಲುವು

ಮುಂಬೈ: ಪಂಜಾಬ್ ಕಿಂಗ್ಸ್ ವಿರುದ್ಧ ಕೊನೆಯ ಎರಡು ಎಸೆತಗಳಲ್ಲಿ ಗುಜರಾತ್ ಟೈಟಾನ್ಸ್ ಗೆಲುವಿಗೆ 12 ರನ್​​ಗಳು ಬೇಕಿದ್ದಾಗ

ಸೂಪರ್ ಹೀರೋ ಆಗಿ ಬಂದ ರಾಹುಲ್ ತೆವಾಟಿಯ ಎರಡು ಸಿಕ್ಸರ್ ಸಿಡಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

ಮುಂಬೈನ ಬ್ರಬೌರ್ನ್ಸ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ವಿರುದ್ಧ ಗುಜರಾತ್ 6 ವಿಕೆಟ್​ಗಳ ಅಮೋಘ ಗೆಲುವು ಸಾಧಿಸಿ ಹ್ಯಾಟ್ರಿಕ್ ಜಯ ಪಡೆದುಕೊಂಡಿದೆ. ಅಲ್ಲದೆ ಪಾಯಿಂಟ್ ಪಟ್ಟಿಯಲ್ಲಿ  ಆರು ಅಂಕದೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದಿದೆ. ಪಂಜಾಬ್ ಪರ ಲಿಯಾಮ್ ಲಿವಿಂಗ್​ಸ್ಟೋನ್ ಮಿಂಚಿದರೆ, ಗುಜರಾತ್ ಪರ ಶುಭ್ಮನ್ ಗಿಲ್ 96 ರನ್​ಗೆ ಔಟಾಗಿ ಶತಕ ವಂಚಿತ ರಾದರು. ಕೊನೇ ಹಂತದಲ್ಲಿ ತೆವಾಟಿಯ ಎರಡು ಸಿಕ್ಸ್ ಸಿಡಿಸಿ ಹಾರ್ದಿಕ್ ಪಡೆಯ ಗೆಲುವಿನ ನಗೆಗೆ ಕಾರಣರಾದರು.

ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಜಾನಿ ಬೈರ್‌ಸ್ಟೋವ್ ವಿಕೆಟ್‌ ಅನ್ನು ಶೀಘ್ರವಾಗಿ ಕಳೆದುಕೊಂಡರೂ ಧವನ್ 35 ರನ್‌ಗಳ ಉತ್ತಮ ಕೊಡುಗೆ ನೀಡಿದರು. ಲಿಯಾಮ್ ಲಿವಿಂಗ್​ಸ್ಟೋನ್ ಮತ್ತೊಂದು ಭರ್ಜರಿ ಇನ್ನಿಂಗ್ಸ್ ಆಡಿದರು. ಲಿವಿಂಗ್​ಸ್ಟೋನ್ ಕೇವಲ 27 ಎಸೆತ ಎದುರಿಸಿದ್ದು 64 ರನ್‌ಗಳ ಕೊಡುಗೆ ನೀಡಿದರು. 7 ಫೋರ್ ಮತ್ತು 4 ಸಿಕ್ಸರ್ ಇವರ ಖಾತೆಯಿಂದ ಬಂತು. ಕೊನೆಯಲ್ಲಿ ರಾಹುಲ್ ಚಹರ್ 14 ಎಸೆತಗಲ್ಲಿ ಅಜೇಯ 22 ರನ್ ಚಚ್ಚಿದರು. ಪರಿಣಾಮ ಕಿಂಗ್ಸ್ 20 ಓವರ್​​ಗೆ 9 ವಿಕೆಟ್ ಕಳೆದುಕೊಂಡು 189 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು.

ಬೃಹತ್ ಗುರಿ ಬೆನ್ನಟ್ಟಿದ ಟೈಟಾನ್ಸ್ ಆರಂಭಿಕ ಆಟಗಾರ ಮ್ಯಾಥ್ಯೂ ವೇಡ್ ವಿಕೆಟ್‌ ಬೇಗನೆ ಕಳೆದುಕೊಂಡಿತ್ತು. ಆದರೆ ಶುಭ್ಮನ್ ಗಿಲ್ ತಂಡಕ್ಕೆ ಭದ್ರ ಅಡಿಪಾಯ ಒದಗಿಸಿದರು. ಅದ್ಭುತ ಪ್ರದರ್ಶನ ನೀಡಿದ ಗಿಲ್ 59 ಎಸೆತಗಳನ್ನು ಎದುರಿಸಿ 96 ರನ್‌ಗಳಿಸಿ ಶತಕದ ಅಂಚಿನಲ್ಲಿ ಎಡವಿದರು. 11 ಫೋರ್ ಮತ್ತು 1 ಸಿಕ್ಸರ್ ಇವರು ಸಿಡಿಸಿದ್ದರು. ನಾಯಕ ಹಾರ್ದಿಕ್ ಪಾಂಡ್ಯ (27) 19ನೇ ಓವರ್‌ನ ಮೊದಲ ಎಸೆತದಲ್ಲಿ ರನೌಟ್ ಆದರು.

ಗುಜರಾತ್ ಗೆಲುವಿಗೆ ಕೊನೆಯ 6 ಎಸೆತಗಳಲ್ಲಿ 19 ರನ್​​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಬೌಲಿಂಗ್‌ ದಾಳಿಗಿಳಿದ ಒಡಿಯನ್‌ ಸ್ಮಿತ್‌, ಮೊದಲ ಬಾಲ್‌ನಲ್ಲಿ ವೈಡ್‌ ಮೂಲಕ ಒಂದು ರನ್‌ ನೀಡಿದರು. ಹೀಗಾಗಿ ಗೆಲುವಿಗೆ 6 ಬಾಲ್‌ಗಳಲ್ಲಿ 18 ರನ್‌ಗಳಿಸ ಬೇಕಿತ್ತು. ಮೊದಲ ಎಸೆತದಲ್ಲಿ ರನ್‌ಗಳಿಸುವ ಆತುರದಲ್ಲಿ ನಾಯಕ ಹಾರ್ದಿಕ್‌ ಪಾಂಡ್ಯ ರನೌಟ್‌ ಬಲೆಗೆ ಬಿದ್ದರು. ಆಗ ಕಣಕ್ಕಿಳಿದ ರಾಹುಲ್‌ ತೆವಾಟಿಯ, 20ನೇ ಓವರ್‌ನ 2ನೇ ಬಾಲ್‌ನಲ್ಲಿ 1 ರನ್‌ಗಳಿಸಿದರು. ಬಳಿಕ 3ನೇ ಬಾಲ್‌ನಲ್ಲಿ ಡೇವಿಡ್‌ ಮಿಲ್ಲರ್‌ ಬೌಂಡರಿ ಬಾರಿಸಿದರೆ, 4ನೇ ಬಾಲ್‌ನಲ್ಲಿ 1 ರನ್‌ಗಳಿಸಿದರು. ಹೀಗಾಗಿ ಕೊನೆಯ ಎರಡು ಬಾಲ್‌ನಲ್ಲಿ ಗುಜರಾತ್‌ ಗೆಲುವಿಗೆ 12 ರನ್‌ಗಳು ಬೇಕಾಯಿತು. 5ನೇ ಬಾಲ್‌ನಲ್ಲಿ ಭರ್ಜರಿ ಸಿಕ್ಸರ್‌ ಸಿಡಿಸಿದ ತೆವಾಟಿಯಾ, ಪಂದ್ಯದ ರೋಚಕತೆಯನ್ನ ಮತ್ತಷ್ಟು ಹೆಚ್ಚಿಸಿದರು. ಪರಿಣಾಮ 1 ಬಾಲ್‌ಗೆ 6 ರನ್‌ ಬೇಕಿತ್ತು.