ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡು ಟಿ20ಐ ಶತಕಗಳನ್ನು ಸಿಡಿಸಿದ್ದ ಭಾರತ ತಂಡದ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಇದೀಗ ಮತ್ತೊಂದು ಟಿ20 ಶತಕವನ್ನು (Syed Mushtaq Ali Trophy) ಸಿಡಿಸಿದ್ದಾರೆ. ಆ ಮೂಲಕ ಸತತ ಮೂರು ಟಿ20 ಶತಕಗಳನ್ನು ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ನೂತನ ದಾಖಲೆಯನ್ನು ತಿಲಕ್ ವರ್ಮಾ ಬರೆದಿದ್ದಾರೆ.
ಶನಿವಾರ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಮೇಘಾಲಯ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಹೈದರಾಬಾದ್ ಪರ ತಿಲಕ್ ವರ್ಮಾ, ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಇವರು ಎದುರಿಸಿದ ಕೇವಲ 67 ಎಸೆತಗಳಲ್ಲಿ ಬರೋಬ್ಬರಿ 10 ಸಿಕ್ಸರ್ ಹಾಗೂ 14 ಬೌಂಡರಿಗಳೊಂದಿಗೆ 151 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಭಾರತೀಯ ಟಿ20 ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಸಿಡಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದರೊಂದಿಗೆ ಮುಂಬೈ ತಂಡದ ಶ್ರೇಯಸ್ ಅಯ್ಯರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಶ್ರೇಯಸ್ ಅಯ್ಯರ್ ಈ ಹಿಂದೆ 147 ರನ್‌ಗಳನ್ನು ಸಿಡಿಸಿದ್ದರು.
IND vs SA: ಚೊಚ್ಚಲ ಟಿ20ಐ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ತಿಲಕ್ ವರ್ಮಾ!
ಭರ್ಜರಿ ಬ್ಯಾಟ್ ಬೀಸಿದ ತಿಲಕ್ ವರ್ಮಾ
ಹೈದರಾಬಾದ್ ಪರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ತಿಲಕ್ ವರ್ಮಾ ಅವರು ಕೇವಲ 28 ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸಿದ್ದರು, ನಂತರ ಮೂರಂಕಿ ಮೊತ್ತವನ್ನು ಕಲೆ ಹಾಕಲು ಅವರು 51 ಎಸೆತಗಳನ್ನು ತೆಗೆದುಕೊಂಡಿದ್ದರು. ಕೇವಲ 10 ದಿನಗಳ ಅಂತರದಲ್ಲಿ ಎಡಗೈ ಬ್ಯಾಟ್ಸ್‌ಮನ್ ಚುಟುಕು ಸ್ವರೂಪದಲ್ಲಿ ಮೂರನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ತಿಲಕ್ ವರ್ಮಾ ಶತಕದ ಬಲದಿಂದ ಹೈದರಾಬಾದ್ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 248 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ ಮೇಘಾಲಯ ಕೇವಲ 69 ರನ್‌ಗಳಿಗೆ ಆಲ್‌ಔಟ್ ಆಯಿತು.
ದಕ್ಷಿಣ ಆಫ್ರಿಕಾ ಟಿ20ಐ ಸರಣಿಯಲ್ಲಿ ಎರಡು ಶತಕ
ಇತ್ತೀಚೆಗೆ ದಕ್ಷಿಣ ಆಫ್ರಿಕಾ ಮುಗಿದಿದ್ದ ನಾಲ್ಕು ಪಂದ್ಯಗಳ ಟಿ20ಐ ಸರಣಿಯಲ್ಲಿಯೇ ತಿಲಕ್ ವರ್ಮಾ ಭರ್ಜರಿ ಫಾರ್ಮ್‌ಗೆ ಮರಳಿದ್ದರು. ಅವರು ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬ್ಯಾಟ್ ಮಾಡಿದ್ದ ತಿಲಕ್ ಸೆಂಚೂರಿಯನ್ ಮತ್ತು ಜೋಹನ್ಸ್‌ಬರ್ಗ್‌ನಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿದ್ದರು. ಆ ಮೂಲಕ ಟೀಮ್ ಇಂಡಿಯಾ 3-1 ಅಂತರದಲ್ಲಿ ಟಿ20ಐ ಸರಣಿಯನ್ನು ಗೆದ್ದುಕೊಂಡಿತ್ತು. ತಿಲಕ್ ವರ್ಮಾ ಜೊತೆಗೆ ಈ ಸರಣಿಯಲ್ಲಿ ಭಾರತದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೂಡ ಎರಡು ಶತಕವನ್ನು ಸಿಡಿಸಿದ್ದರು.
🚨 𝙈𝙞𝙡𝙚𝙨𝙩𝙤𝙣𝙚 𝘼𝙡𝙚𝙧𝙩 🚨
— BCCI Domestic (@BCCIdomestic) November 23, 2024
Tilak Varma 🤝 Record-breaking Feat! 🔝 🙌
Congratulations! 👏 👏#TeamIndia | #SMAT pic.twitter.com/4BnLFZzRRf
ತಿಲಕ್ ವರ್ಮಾರ ಟಿ20 ಅಂಕಿ ಅಂಶಗಳು
ತಿಲಕ್ ವರ್ಮಾ ಅವರು ಇಲ್ಲಿಯವರೆಗೂ ಆಡಿದ 90 ಟಿ20 ಇನಿಂಗ್ಸ್‌ಗಳಿಂದ ನಾಲ್ಕು ಶತಕಗಳೊಂದಿಗೆ 2950 ರನ್‌ಗಳನ್ನು ಕಲೆ ಹಾಕಿದ್ದಾರೆ. ಇವರ ಈ ಸ್ಪೋಟಕ ಇನಿಂಗ್ಸ್ ದೇಶಿ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆಂಕರ್ ಪಾತ್ರವನ್ನು ಪ್ರತಿಬಿಂಬಿಸುತ್ತದೆ. ಇದೀಗ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಹೈದರಾಬಾದ್ ತಂಡವನ್ನು ಮುನ್ನಡೆಸುತ್ತಿದ್ದು, ಇನ್ನಷ್ಟು ದೇಶಿ ಶತಕಗಳನ್ನು ಸಿಡಿಸುವ ವಿಶ್ವಾಸವನ್ನು ಹೊಂದಿದ್ದಾರೆ.