Friday, 13th December 2024

ವೇಗಿ ಉಮೇಶ್‌ ಸ್ಥಾನಕ್ಕೆ ನಟರಾಜನ್‌: ಯುವ ಆಟಗಾರನಿಗೆ ಜ್ಯಾಕ್’ಪಾಟ್‌

ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಗಾಯಾಳು ಉಮೇಶ್ ಯಾದವ್ ಸ್ಥಾನಕ್ಕೆ ತಮಿಳುನಾಡು ಮೂಲದ ಯುವ ವೇಗದ ಬೌಲರ್ ತಂಗರಸು ನಟರಾಜನ್ ರನ್ನು ಹೆಸರಿಸಲಾಗಿದೆ.

ಇದೇ ಆಸೀಸ್ ಪ್ರವಾಸದಲ್ಲಷ್ಟೇ ನಟರಾಜನ್, ಟ್ವೆಂಟಿ-20 ಹಾಗೂ ಏಕದಿನ ಅಂತರ ರಾಷ್ಟ್ರೀಯ ಕ್ರಿಕೆಟ್‌ಗೆ ಪ್ರಭಾವಿ ಡೆಬ್ಯು ಮಾಡಿದ್ದರು. ಟಿ20 ತಂಡದಲ್ಲಿ ಗಾಯಾಳು ಚಕ್ರವರ್ತಿ ಸ್ಥಾನಕ್ಕೆ ನಟರಾಜನ್ ಆಯ್ಕೆಯಾಗಿದ್ದರು. ಈಗ ಟೆಸ್ಟ್ ತಂಡದಲ್ಲಿ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದ ನಟರಾಜನ್, ಪ್ರಮುಖ ಬೌಲರ್ ಗಾಯಾಳುವಾದ ಹಿನ್ನೆಲೆಯಲ್ಲಿ ಸ್ಥಾನ ಪಡೆದಿದ್ದಾರೆ.

ಈ ಮೊದಲು ಪ್ರಥಮ ಟೆಸ್ಟ್‌ನಲ್ಲಿ ಮೊಹಮ್ಮದ್ ಶಮಿ ಗಾಯಗೊಂಡು ಸರಣಿ ಯಿಂದ ಹೊರಗುಳಿವಂತಾಗಿತ್ತು. ಇವರ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಅವರನ್ನು ಹೆಸರಿಸಲಾಗಿದೆ. ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ಮಾಡುತ್ತಿರುವ ವೇಳೆಗೆ ಉಮೇಶ್ ಯಾದವ್ ಮೀನಖಂಡದ ನೋವಿಗೆ ಒಳಗಾಗಿದ್ದರು. ತದಾ ಬಳಿಕ ಬೌಲಿಂಗ್ ಮುಂದುವರಿಸಲಾಗದೇ ಪಂದ್ಯ ದಿಂದ ಹೊರಗುಳಿದಿದ್ದರು.

ಈಗ ತಾಯ್ನಾಡಿಗೆ ಹಿಂತಿರುಗಲಿರುವ ಉಮೇಶ್ ಯಾದವ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಮುಂಬರುವ ತವರಿನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸರಣಿ ವೇಳೆಗೆ ಫಿಟ್ ಆಗುವ ನಿರೀಕ್ಷೆಯಿದೆ. ಗಾಯದಿಂದ ಚೇತರಿಸಿಕೊಂಡು ತಂಡ ಸೇರಿರುವ ಉಪನಾಯಕ ರೋಹಿತ್ ಶರ್ಮಾ, ಅಂತಿಮ ಎರಡು ಪಂದ್ಯಕ್ಕಾಗಿ ತಂಡವನ್ನು ಸೇರಿದ್ದಾರೆ.

ತಂಡ ಇಂತಿದೆ: ಅಜಿಂಕ್ಯ ರಹಾನೆ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಮಯಂಕ್ ಅಗರವಾಲ್, ಪೃಥ್ವಿ ಶಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ಶುಭಮನ್ ಗಿಲ್, ವೃದ್ದಿಮಾನ್ ಸಹಾ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಜಸ್‌ಪ್ರೀತ್ ಬೂಮ್ರಾ, ನವದೀಪ್ ಸೈನಿ, ಕುಲ್‌ದೀಪ್ ಯಾದವ್, ರವೀಂದ್ರ ಜಡೇಜ, ಆರ್. ಅಶ್ವಿನ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ಟಿ. ನಟರಾಜನ್.

ಅಂತಿಮ ಎರಡು ಟೆಸ್ಟ್ ಪಂದ್ಯಗಳ ವೇಳಾಪಟ್ಟಿ ಇಂತಿದೆ:
ಮೂರನೇ ಟೆಸ್ಟ್: ಜ.7ರಿಂದ 11ರ ವರೆಗೆ, ಸಿಡ್ನಿ ಕ್ರಿಕೆಟ್ ಮೈದಾನ
ಅಂತಿಮ ಟೆಸ್ಟ್: ಜ.15ರಿಂದ 19ರ ವರೆಗೆ, ಬ್ರಿಸ್ಬೇನ್.