Saturday, 7th September 2024

ಸ್ಫೋಟಿಸಿದ ರಾಹುಲ್-ರೋಹಿತ್‌: ಟೀಮ್ ಇಂಡಿಯಾ ಸೆಮೀಸ್‌’ಗೆ ಇನ್ನಷ್ಟು ಹತ್ತಿರ

ದುಬೈ: ಟೀಮ್ ಇಂಡಿಯಾ ಸ್ಕಾಟ್ಲೆಂಡ್ ತಂಡವನ್ನು 8 ವಿಕೆಟ್​ಗಳಿಂದ ಸದೆಬಡಿದಿದೆ. ಅಫ್ಘಾನಿಸ್ತಾನ್ ವಿರುದ್ಧ 66 ರನ್​ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿತ್ತು.
ಕೆಎಲ್ ರಾಹುಲ್ 18 ಎಸೆತದಲ್ಲಿ ಅರ್ಧಶತಕ ಗಳಿಸಿದ ಪರಿಣಾಮ ಭಾರತ 81 ರನ್ ಬಾಕಿ ಇರುವಂತೆ ದಿಗ್ವಿಜಯ ಸಾಧಿಸಿತು. ನಿರೀಕ್ಷಿಸಿದ್ದಕ್ಕಿಂತ ದೊಡ್ಡ ಅಂತರದ ಗೆಲುವು ಭಾರತಕ್ಕೆ ದಕ್ಕಿತು. ಇದರೊಂದಿಗೆ ಭಾರತದ ಸೆಮಿಫೈನಲ್ ಸಾಧ್ಯತೆ ಇನ್ನಷ್ಟು ಹಿಗ್ಗಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡದ 85 ರನ್ ಸಾಧಾರಣ ಮೊತ್ತಕ್ಕೆ ಪ್ರತಿಯಾಗಿ ಭಾರತ ಸಾಧ್ಯವಾದಷ್ಟು ವೇಗದಲ್ಲಿ ಪಂದ್ಯ ಗೆಲ್ಲುವತ್ತ ಗಮನ ಕೊಟ್ಟಿತು. ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಕೇವಲ 5 ಓವರ್​ನಲ್ಲಿ 70 ರನ್ ಸೇರಿಸಿದರು. ರಾಹುಲ್ 19 ಬಾಲ್​ನಲ್ಲಿ 50 ರನ್ ಗಳಿಸಿದರೆ, ರೋಹಿತ್ 16 ಎಸೆತದಲ್ಲಿ 30 ರನ್ ಚಚ್ಚಿದರು. 6.3 ಓವರ್​​ನಲ್ಲಿ ಭಾರತ ಗುರಿ ಮುಟ್ಟಿತು.

ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಹೋಯಿತು. ಆರಂಭಿಕ ಆಟಗಾರ ಜಾರ್ಜ್ ಮುನ್ಸೀ ಅವರೊಬ್ಬರು ಮಾತ್ರ ನಿರ್ಭೀತಿಯಿಂದ ಬ್ಯಾಟ್ ಮಾಡಿದ್ದು, ಅವರು ಕ್ರೀಸ್​ನಲ್ಲಿರುವವರೆಗೂ ಸ್ಕಾಟ್ಲೆಂಡ್ ತಂಡ ಉತ್ತಮ ಮೊತ್ತ ಕಲೆ ಹಾಕುವ ನಿರೀಕ್ಷೆ ಇತ್ತು. ಭಾರತದ ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ತಲಾ 3 ವಿಕೆಟ್ ಕಿತ್ತರು. ಬೂಮ್ರಾ 2 ವಿಕೆಟ್ ಪಡೆದರೆ ಅಶ್ವಿನ್​ಗೆ ಒಂದು ಮಾತ್ರ ಯಶಸ್ಸು ಸಿಕ್ಕಿತು. ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಉತ್ತಮವಾಗಿ ಬೌಲ್ ಮಾಡಿದರೂ ವಿಕೆಟ್ ಲಭಿಸಲಿಲ್ಲ.

ಭಾರತ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿಯಿತು. ನೆಟ್ ರನ್ ರೇಟ್ 1.619ಕ್ಕೆ ಹಿಗ್ಗಿತು. ಭಾರತದ ರನ್ ರೇಟ್ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನದಕ್ಕಿಂತ ಉತ್ತಮವಾಗಿದೆ.

ಶುಕ್ರವಾರ ನಡೆದ ನಡೆದ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ನ್ಯೂಜಿಲೆಂಡ್ ನಿರೀಕ್ಷಿತ ಗೆಲುವು ಸಾಧಿಸಿತು. ಕಿವೀಸ್ ತಂಡ 52 ರನ್​ಗಳ ಅಂತರದ ಜಯಕ್ಕೆ ತೃಪ್ತಿಪಡಬೇಕಾಯಿತು. ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ನಮೀಬಿಯಾ ಉತ್ತಮವಾಗಿಯೇ ಆಡಿತಾದರೂ ಕೊನೆಗೆ 111 ರನ್ ಮಾತ್ರ ಗಳಿಸಲು ಶಕ್ಯ ವಾಯಿತು. ಮೊದಲ ವಿಕೆಟ್​ಗೆ ಉತ್ತಮ ಜೊತೆಯಾಟ ಬಂದಾಗ ನಮೀಬಿಯಾ ಗೆಲುವಿನ ಸಮೀಪವಾದರೂ ಹೋಗಬಹುದೆಂಬ ನಿರೀಕ್ಷೆ ಇತ್ತು.

ನ್ಯೂಜಿಲೆಂಡ್ ಈ ಗೆಲುವಿನೊಂದಿಗೆ ಒಟ್ಟಾರೆ 6 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಅದರ ನೆಟ್ ರನ್ ರೇಟ್ 1.277ಕ್ಕೆ ಏರಿದೆ. ಸೋಮವಾರ ದುಬೈನಲ್ಲಿ ನಡೆಯಲಿರುವ ಭಾರತ ಮತ್ತು ನಮೀಬಿಯಾ ನಡುವಿನ ಪಂದ್ಯ ನಿರ್ಣಾಯಕ ಎನಿಸಲಿದೆ. ಸ್ಕಾಟ್ಲೆಂಡ್ ವಿರುದ್ಧ ಗೆದ್ದಂತೆ ನಮೀಬಿಯಾ ವಿರುದ್ಧ ಭಾರತ ದೊಡ್ಡ ಅಂತರದಿಂದ ಗೆದ್ದರೆ ಸೆಮಿಫೈನಲ್ ಪ್ರವೇಶ ಖಚಿತವಾಗುತ್ತದೆ.

Leave a Reply

Your email address will not be published. Required fields are marked *

error: Content is protected !!