Friday, 13th December 2024

ಭಾರತ ತಂಡದ ಮೇಲೆ ಸೋಲಿನ ಕರಿನೆರಳು

ಆಡಿಲೇಡ್‌: ಶನಿವಾರ ಅಡಿಲೇಡ್ ಓವಲ್‌ ಕ್ರೀಡಾಂಗಣದಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಗಳಿಸಿದ ವೈಯಕ್ತಿಕ ಸ್ಕೋರ್‌ಗಳು ಸಿಂಗಲ್‌ ಡಿಜಿಟ್‌ ಗಳಾಗಿದ್ದವು.

11 ಬ್ಯಾಟ್ಸ್‌ಮನ್‌ಗಳು ಸೇರಿಸಿದ 36 ರನ್‌ಗಳು. ಟೆಸ್ಟ್‌ ಇತಿಹಾಸದಲ್ಲಿಯೇ ಗಳಿಸಿದ ಕನಿಷ್ಠ ಮೊತ್ತವಾಗಿ ದಾಖಲಾಯಿತು. ಪಂದ್ಯದ ಎರಡನೇ ದಿನ ಆರ್. ಅಶ್ವಿನ್, ಜಸ್‌ಪ್ರೀತ್ ಬೂಮ್ರಾ ಮತ್ತು ಉಮೇಶ್ ಯಾದವ್ ಅವರ ಅಮೋಘ ಬೌಲಿಂಗ್‌ನಿಂದ ಪುಟಿ ದೆದ್ದಿದ್ದ ಭಾರತ ತಂಡವು ಮೂರನೇ ದಿನ ಊಟದ ವಿರಾಮಕ್ಕೆ ಇನ್ನೂ ಅರ್ಧ ಗಂಟೆ ಬಾಕಿಯಿರುವಾಗಲೇ ಬರಸಿಡಿಲು ಬಡಿ ಯಿತು.

36 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂತಹದೊಂದು ಹೀನಾಯ ಬ್ಯಾಟಿಂಗ್ ಅನ್ನು ತಂಡವು ಪ್ರದರ್ಶಿಸಿದೆ. 1974ರಲ್ಲಿ ಇಂಗ್ಲೆಂಡ್ ಎದುರು ಲಾರ್ಡ್ಸ್‌ನಲ್ಲಿ ಗಳಿಸಿದ್ದ 42 ರನ್‌ಗಳು ಇಲ್ಲಿಯವರೆಗಿನ ಕನಿಷ್ಠ ಮೊತ್ತವಾಗಿತ್ತು. ಆಸ್ಟ್ರೇಲಿಯಾ ಎದುರು ಬ್ರಿಸ್ಬೆನ್‌ನಲ್ಲಿ 1947ರಲ್ಲಿ ನಡೆದಿದ್ದ ಪಂದ್ಯದಲ್ಲಿ 58 ರನ್, ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ಎದುರು 1952ರಲ್ಲಿ ಗಳಿಸಿದ್ದ 58 ರನ್. 1996ರಲ್ಲಿ ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು 66 ರನ್ ಮತ್ತು 1948ರಲ್ಲಿ ಆಸ್ಟ್ರೇಲಿಯಾ ಎದುರು ಮೆಲ್ಬರ್ನ್‌ನಲ್ಲಿ 67 ರನ್‌ ಗಳಿಸಿದ್ದ ಭಾರತ ಇವತ್ತು ಅದೆಲ್ಲವನ್ನೂ ಮೀರಿದ ಕಳಂಕವನ್ನು ತನ್ನ ಹೆಸರಿಗೆ ಬಳಿದುಕೊಂಡಿದೆ.

ಟೆಸ್ಟ್ ಪರಿಣತ ಚೇತೇಶ್ವರ್ ಪೂಜಾರ, ಹನುಮವಿಹಾರಿ ಮತ್ತು ಮಯಂಕ್ ಅಗರವಾಲ್ ಅವರಂತಹವರಿಗೂ ಆಸ್ಟ್ರೇಲಿಯಾ ವೇಗಿಗಳ ಎಸೆತಗಳ ವಿರುದ್ಧ ಆಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಮೂರನೇ ದಿನ ಮೈದಾನದಲ್ಲಿ ಹೊನಲು ಬೆಳಕು ಚೆಲ್ಲುವ ಮುನ್ನವೇ ಭಾರತ ತಂಡದ ಮೇಲೆ ಸೋಲಿನ ಕರಿನೆರಳು ಆವರಿಸಿತು.