Thursday, 3rd October 2024

ಟೀಂ ಇಂಡಿಯಾ ಆಟಗಾರರ ಕೋವಿಡ್ ವರದಿ ನೆಗೆಟಿವ್‌

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡ ಭಾನುವಾರ RT-PCR ಟೆಸ್ಟ್ ಮಾಡಿಸಿಕೊಂಡಿದ್ದು ಎಲ್ಲ ಆಟಗಾರರ ಕೊರೊನಾ ವರದಿ ನೆಗೆಟಿವ್ ಎಂದು ತಿಳಿದುಬಂದಿದೆ. ಜೊತೆಗೆ ಟೀಮ್ ಇಂಡಿಯಾ ಜೊತೆ ತೆರಳಿರುವ ಸಿಬ್ಬಂದಿಯ ವರದಿಯೂ ನೆಗೆಟಿವ್ ಎಂದು ಹೇಳಲಾಗಿದೆ.

ಟೀಮ್ ಇಂಡಿಯಾ ಆಟಗಾರರಾದ ರೋಹಿತ್ ಶರ್ಮಾ, ಪೃಥ್ವಿ ಶಾ, ರಿಷಬ್ ಪಂತ್, ಶುಭ್ ಮನ್ ಗಿಲ್ ಹಾಗೂ ನವದೀಪ್ ಸೈನಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ರೆಸ್ಟೋರೆಂಟಿಗೆ ತೆರಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ರೆಸ್ಟೋರೆಂಟ್ ನಲ್ಲಿ ಅಭಿಮಾನಿಯೊಬ್ಬರೊಂದಿಗೆ ಕಾಲ ಕಳೆದದ್ದು ಸಹ ಚರ್ಚೆಗೆ ಗುರಿಯಾಗಿತ್ತು.

ಇದೀಗ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪಕ್ಕೆ ಗುರಿಯಾಗಿದ್ದ ಐವರು ಆಟಗಾರರು ಸೇರಿದಂತೆ ಎಲ್ಲರ ವರದಿ ನೆಗೆಟಿವ್ ಎಂದು ಹೇಳಲಾಗಿದೆ. ಹೀಗಾಗಿ ಮುಂದಿನ ಪಂದ್ಯಗಳು ಸುಗಮವಾಗಿ ನಡೆಯುವ ನಿರೀಕ್ಷೆಯಿದೆ. ಇದರ ಮಧ್ಯೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬಿಸಿಸಿಐ ತನ್ನ ಆಟಗಾರರಿಗೆ ಸೂಚಿಸಿದೆ ಎಂದು ಹೇಳಲಾಗಿದೆ.