Sunday, 13th October 2024

ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ: ಮಿಂಚಿದ ಶ್ರೇಯಸ್‌, ಅಶ್ವಿನ್

ಢಾಕಾ: ಟೀಂ ಇಂಡಿಯಾ ಬಾಂಗ್ಲಾದೇಶದ ವಿರುದ್ಧ ಭಾನುವಾರ 2ನೇ ಟೆಸ್ಟ್‌ನಲ್ಲಿ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿತು.

ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಹಾದಿಯನ್ನು ಸುಗಮವಾಗಿಸಿ ಕೊಂಡಿದೆ.

ಮೊದಲನೇ ಟೆಸ್ಟ್ ಪಂದ್ಯ ಗೆದ್ದ ಬಳಿಕ ಭಾರತ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗದಿತ್ತು. ಈಗ ಸರಣಿ ಗೆಲ್ಲುವ ಮೂಲಕ ಪಿಸಿಟಿ ಅಂಕಗಳನ್ನು ಮತ್ತಷ್ಟು ಉತ್ತಮಪಡಿಸಿ ಕೊಂಡಿದೆ.

ಶ್ರೇಯಸ್ ಅಯ್ಯರ್ ಮತ್ತು ಅಶ್ವಿನ್ ಪ್ರವಾಸಿ ತಂಡಕ್ಕೆ ಮೂರು ವಿಕೆಟ್‌ಗಳ ರೋಚಕ ಗೆಲುವು ತಂದುಕೊಟ್ಟರು. ಕೆಎಲ್ ರಾಹುಲ್ ನೇತೃತ್ವದ ತಂಡವು ಈಗ ಭಾರತ ಮತ್ತು ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ನಡುವಿನ ಅಂತರವನ್ನು ಹೆಚ್ಚಿಸಿದೆ. ಭಾರತ ತನ್ನ ಮುಂದಿನ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.

ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಚಕ್ರದ ಕೊನೆಯ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಕನಿಷ್ಠ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಫೈನಲ್‌ಗೆ ಸುಲಭವಾಗಿ ಪ್ರವೇಶ ಪಡೆಯಲಿದೆ.ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮೊದಲನೇ ಪಂದ್ಯವನ್ನು ಸೋತಿದೆ. ಉಳಿದ ಎರಡು ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ಸೋತರೆ ಅದು ಫೈನಲ್‌ ಪ್ರವೇಶಿಸುವುದು ಭಾರಿ ಕಷ್ಟವಾಗಲಿದ್ದು, ಭಾರತದ ಹಾದಿ ಸುಲಭವಾಗಲಿದೆ.

ಎರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆದ್ದರೆ ಭಾರತಕ್ಕೆ ಕಷ್ಟವಾಗಲಿದೆ.