Friday, 13th December 2024

ಏಷ್ಯಾ ಕಪ್ ಟಿ20: ವನಿತೆಯರ ಟೀಂ ಇಂಡಿಯಾ ಫೈನಲ್‌ಗೆ ಲಗ್ಗೆ

ಸಿಲೆಟ್: ಮಹಿಳೆಯರ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ಥಾಯ್ಲೆಂಡ್ ವಿರುದ್ಧ 74 ರನ್‌ ಅಂತರದ ಸುಲಭ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಟಾಸ್‌ ಗೆದ್ದ ಥಾಯ್ಲೆಂಡ್ ತಂಡದ ನಾಯಕಿ ನೆರುಮಾಲ್ ಚೈವೈ ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿದ ಹರ್ಮನ್‌ ಪ್ರೀತ್ ಕೌರ್‌ ಪಡೆ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 148 ರನ್‌ ಗಳಿಸಿತು.

ಬಿರುಸಿನ ಬ್ಯಾಟರ್‌ ಶೆಫಾಲಿ ವರ್ಮಾ ಕೇವಲ 28 ಎಸೆತಗಳಲ್ಲಿ 48 ರನ್‌ ಚಚ್ಚಿದರು. ಜೆಮಿಯಾ ರಾಡ್ರಿಗಸ್‌ (27 ರನ್‌) ಮತ್ತು ನಾಯಕಿ ಕೌರ್‌ (36 ರನ್‌) ಉತ್ತಮ ಆಟವಾಡಿದರು. ಸೊರ್ನಾರಿನ್‌ ಟಿಪೋಚ್ ಮೂರು ವಿಕೆಟ್‌ ಪಡೆದು ಮಿಂಚಿದರು.

ಗುರಿ ಬೆನ್ನತ್ತಿದ ಥಾಯ್ಲೆಂಡ್‌ ಪಡೆ 9 ವಿಕೆಟ್‌ ಕಳೆದುಕೊಂಡು 74 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಥಾಯ್ಲೆಂಡ್‌ಗೆ ಆರಂಭದಲ್ಲೇ ಆಘಾತ ನೀಡಿದ ಸ್ಪಿನ್ನರ್‌ ದೀಪ್ತಿ ಶರ್ಮಾ ನಾಲ್ಕು ಓವರ್‌ಗಳಲ್ಲಿ ಕೇವಲ 7 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು.