ಇಂದೋರ್: ಭಾರತವೀಗ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಭಾನುವಾರ ಇಂದೋರ್‌ನಲ್ಲಿ ಗೆದ್ದರೆ ಸರಣಿ ಟೀಮ್ ಇಂಡಿಯಾ ವಶವಾಗಲಿದೆ.
ಮೊಹಾಲಿ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಜಯಿಸಿತ್ತು. 4ಕ್ಕೆ 159 ರನ್ ಗಳಿಸುವ ವೇಳೆ ಆಗಿನ್ನೂ 2.3 ಓವರ್ ಬಾಕಿ ಇತ್ತು. ಶಿವಂ ದುಬೆ ಅಜೇಯ 60 ರನ್ ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶುಭಮನ್ ಗಿಲ್, ತಿಲಕ್ ವರ್ಮ, ಜಿತೇಶ್ ಶರ್ಮ, ರಿಂಕು ಸಿಂಗ್… ಎಲ್ಲರೂ ಬ್ಯಾಟಿಂಗ್‌ನಲ್ಲಿ ಯಶಸ್ಸು ಕಂಡಿದ್ದರು.
ಮೊದಲ ಪಂದ್ಯದಿಂದ ಹೊರಗುಳಿ ದಿದ್ದ ವಿರಾಟ್ ಕೊಹ್ಲಿ ಇಂದೋರ್‌ನಲ್ಲಿ ಆಡಲಿದ್ದಾರೆ.
ಜಿತೇಶ್ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳಲ್ಲಿ ಕ್ರಮವಾಗಿ 39, 51 ಮತ್ತು ಅಜೇಯ 49 ರನ್ ಹೊಡೆದು ಗಮನ ಸೆಳೆದಿದ್ದರು. ಅನಂತರದ 13 ಇನ್ನಿಂಗ್ಸ್ ಗಳಲ್ಲಿ ಬಾರಿಸಿದ್ದು ಒಂದೇ ಶತಕಾರ್ಧ. ಇದು ಏಷ್ಯಾಡ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಬಂದಿತ್ತು.
ಲೆಗ್‌ಸ್ಪಿನ್ನರ್ ರಶೀದ್ ಖಾನ್ ಗೈರು ಖಂಡಿತವಾಗಿಯೂ ಅಫ್ಘಾನ್‌ಗೆ ಒಂದು ಹಿನ್ನಡೆ. ರಶೀದ್ ಇದ್ದಿದ್ದರೆ ಬಹುಶಃ ಮೊದಲ ಪಂದ್ಯ 20ನೇ ಓವರ್ ತನಕ ಎಳೆಯಲ್ಪಡುತ್ತಿತ್ತೋ ಏನೋ. ಇವರ ಗೈರಲ್ಲಿ ಬಹುತೇಕ ಬೌಲರ್ ದುಬಾರಿ ಆಗಿದ್ದರು. ನಿಯಂತ್ರಣ ಸಾಧಿಸಿದ್ದು ಮುಜೀಬ್ ಉರ್ ರೆಹಮಾನ್ ಮಾತ್ರ. ಒಂದು ಮೇಡನ್ ಓವರ್ ಕೂಡ ಎಸೆದಿದ್ದರು.
ಅಫ್ಘಾನ್ ಅಪಾಯಕಾರಿ ತಂಡವಾದರೂ ಬ್ಯಾಟಿಂಗ್ ವಿಭಾಗದಲ್ಲಿ ಇದೇನೂ ಗೋಚರಕ್ಕೆ ಬರಲಿಲ್ಲ. ಮೊಹಮ್ಮದ್ ನಬಿ ಮಾತ್ರ ಟಿ20 ಜೋಶ್‌ನಲ್ಲಿದ್ದರು. ಅಗ್ರ ಕ್ರಮಾಂಕದ ಮೂವರು ತಲಾ ಒಂದು ಸಿಕ್ಸರ್, 2 ಬೌಂಡರಿ ಹೊಡೆದರೂ ಮೂವತ್ತರ ಗಡಿಯಾಚೆ ಸಾಗಲಿಲ್ಲ.