Thursday, 12th December 2024

‘ಬಿರಿಯಾನಿ ತಿನ್ನಲು ಮೋದಿ ಪಾಕ್‌ಗೆ ಹೋಗಬಹುದು’; ಕ್ರಿಕೆಟ್‌ ತಂಡ ಯಾಕೆ ಹೋಗಬಾರದು?; ಮಾಜಿ ಕ್ರಿಕೆಟಿಗನ ಪ್ರಶ್ನೆ

ನವದೆಹಲಿ: ಮುಂದಿನ ವರ್ಷ ಫೆಬ್ರವರಿ-ಮಾರ್ಚ್​ನಲ್ಲಿ ಪಾಕಿಸ್ತಾನದಲ್ಲಿ ನಿಗದಿಯಾಗಿರುವ ಚಾಂಪಿಯನ್ಸ್‌ ಟ್ರೋಫಿಗೆ ಭದ್ರತಾ ಭೀತಿಯಿಂದಾಗಿ ಭಾರತ ತಂಡವನ್ನು ಪಾಕ್​ಗೆ ಕಳುಹಿಸಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಹೈಬ್ರಿಡ್​ ಮಾದರಿಯಲ್ಲಿ ಟೂರ್ನಿ ನಡೆಸಬೇಕೆಂದು ಒತ್ತಾಯಿಸಿದೆ. ಇಂದು ನಡೆಯುವ ಐಸಿಸಿ ವರ್ಚುವಲ್​ ಮಹತ್ವದ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಇದೀಗ ಆರ್‌ಜೆಡಿ ನಾಯಕ, ಮಾಜಿ ಕ್ರಿಕೆಟಿಗ ತೇಜಸ್ವಿ ಯಾದವ್‌(Tejashwi Yadav) ಪ್ರಧಾನಿ ಮೋದಿ(PM Modi) ವಿರುದ್ಧ ಹರಿಹಾಯ್ದಿದ್ದಾರೆ. ʼಪ್ರಧಾನಿ ಮೋದಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಬಹುದಾದರೆ, ಭಾರತೀಯ ಕ್ರಿಕೆಟ್‌ ತಂಡ ಪಾಕಿಸ್ತಾನಕ್ಕೆ ಹೋಗಿ ಏಕೆ ಆಡಬಾರದು? ಎಂದು ಪ್ರಶ್ನಿಸಿದ್ದಾರೆ.

ಶುಕ್ರವಾರ ಮಾಧ್ಯಮದ ಜತೆ ಮಾತನಾಡಿದ ತೇಜಸ್ವಿ ಯಾದವ್‌, ʼನನಗೆ ಒಂದು ವಿಚಾರ ಅರ್ಥವಾಗುತ್ತಿಲ್ಲ. ಪ್ರಧಾನಿಯೇ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಆದರೆ ಕ್ರಿಕೆಟ್‌ ತಂಡವನ್ನು ಏಕೆ ಕಳುಹಿಸುವುದಿಲ್ಲ. ಕ್ರೀಡೆಯಲ್ಲಿ ರಾಜಕೀಯ ಬೇಡ. ಕ್ರೀಡೆಯಲ್ಲಿ ಯುದ್ಧವೇನು ನಡೆಯುತ್ತಿಲ್ಲವಲ್ಲ. ಪ್ರಧಾನಿ ಮೋದಿಯವರು ಪಾಕಿಸ್ತಾನಕ್ಕೆ ಬಿರಿಯಾನಿ ತಿನ್ನಲು ಹೋದರೆ ಅದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಆದರೆ ಭಾರತ ತಂಡವು ಪಾಕಿಸ್ತಾನಕ್ಕೆ ಆಡಲು ಹೋದರೆ, ಅದನ್ನು ತಪ್ಪಾಗಿ ನೋಡಲಾಗುತ್ತದೆ. ಇದು ಸರಿಯಲ್ಲʼ ಎಂದು ತೇಜಸ್ವಿ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.

ತೇಜಸ್ವಿ ಯಾದವ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂದು, ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 2,ಟಿ20ಯಲ್ಲಿ 4 ಪಂದ್ಯಗಳನ್ನು ಆಡಿ ಒಟ್ಟು 37 ರನ್‌ ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಡೆಲ್ಲಿ ತಂಡದ ಪರ ಕಾಣಿಸಿಕೊಂಡಿದ್ದರೂ ಆಡುವ ಅವಕಾಶ ಸಿಕ್ಕಿರಲಿಲ್ಲ.

ಇದನ್ನೂ ಓದಿ Navjot Singh Sidhu: ನಿಂಬೆ ರಸ, ಡಯಟ್‌ನಿಂದ ಪತ್ನಿಯ ಕ್ಯಾನ್ಸರ್‌ ಮಾಯ ಎಂದ ನವಜೋತ್ ಸಿಂಗ್‌ಗೆ ಸಂಕಷ್ಟ

ಭಾರತ ಮತ್ತು ಪಾಕಿಸ್ತಾಮ ಕೊನೆಯ ಬಾರಿಗೆ 2012-13ರಲ್ಲಿ ಭಾರತದಲ್ಲಿ ದ್ವಿಪಕ್ಷೀಯ ಸರಣಿಯನ್ನು ಆಡಿತ್ತು. ಆ ಬಳಿಕ ರಾಜಕೀಯ ಸಂಬಂಧಗಳ ಹದಗೆಟ್ಟ ಕಾರಣ ಉಭಯ ತಂಡಗಳು ದ್ವಿಪಕ್ಷೀಯ ಸರಣಿ ಏರ್ಪಟ್ಟಿಲ್ಲ. ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.

2015ರಲ್ಲಿ ಪಾಕ್‌ಗೆ ಭೇಟಿ ನೀಡಿದ್ದ ಮೋದಿ

ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾದ ಸಂದರ್ಭದಲ್ಲಿ 2015ರಲ್ಲಿ ಲಾಹೋರ್‌ಗೆ ಅನಿರೀಕ್ಷಿತ ಭೇಟಿ ನೀಡಿ ಭಾರೀ ಸಂಚಲನ ಮೂಡಿಸಿದ್ದರು. ಮೋದಿ ಅವರು ಪಾಕಿಸ್ತಾನದಲ್ಲಿ ಇದ್ದದ್ದು ಸುಮಾರು 150 ನಿಮಿಷ ಮಾತ್ರ. ಆದರೆ ಅವರ ಈ ಇಡೀ ಭೇಟಿ ನೆರೆ ರಾಷ್ಟ್ರವೊಂದರ ಪ್ರಧಾನಿಯ ಅಧಿಕೃತ ಪ್ರವಾಸದ ರೀತಿಯಲ್ಲಿ ಇರಲೇ ಇಲ್ಲ. ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ ಮೋದಿ ದೆಹಲಿಗೆ ಮರಳಬೇಕಾಗಿತ್ತು. ಆದರೆ ಲಾಹೋರ್‌ಗೆ ತೆರಳಿ ಪಾಕಿಸ್ತಾನದ ಅಂದಿನ ಪ್ರಧಾನಿಯಾಗಿದ್ದ ನವಾಜ್ ಶರೀಫ್ ಭೇಟಿ ಮಾಡಿ ಅವರ ಮೊಮ್ಮಗಳ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.