Saturday, 30th November 2024

Champions Trophy: ಭಾರತದ ಕೈಯಲ್ಲಿ ಪಾಕ್‌ನ ಚಾಂಪಿಯನ್ಸ್‌ ಟ್ರೋಫಿ ಆತಿಥ್ಯದ ಭವಿಷ್ಯ! ಏನಿದು ವಿವಾದ? ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ!

ICC Champions Trophy 2025

ನವದೆಹಲಿ: ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ನಡೆಬೇಕಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy) ಟೂರ್ನಿಯ ಬಗೆಗಿನ ಹಗ್ಗ-ಜಗ್ಗಾಟ ದಿನದಿಂದ ದಿನಕ್ಕೆ ತೀವ್ರ ಕುತೂಹಲ ಕೆರೆಳಿಸುತ್ತಿದೆ. 50 ಓವರ್‌ಗಳ ಈ ಮಹತ್ವದ ಟೂರ್ನಿಯು 2025ರ ಫೆಬ್ರವರಿ 19 ರಿಂದ ಮಾರ್ಚ್‌ 9ರವರೆಗೆ ಪಾಕಿಸ್ತಾನದ ವಿವಿಧ ಸ್ಥಳಗಳಲ್ಲಿ ನಡೆಸಲು ನಿಗದಿಪಡಿಸಲಾಗಿದೆ. ಆದರೆ, ಟೂರ್ನಿಯ ಆರಂಭಕ್ಕೂ ಮೊದಲೇ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ಗೆ ದೊಡ್ಡ ತಲೆ ನೋವು ಶುರುವಾಗಿದೆ.

ಒಂದು ಕಡೆ ಭಾರತ ತಂಡ ಕಡ್ಡಾಯವಾಗಿ ಪಾಕಿಸ್ತಾನಕ್ಕೆ ಬರಲೇಬೇಕು ಹಾಗೂ ತಮ್ಮ ದೇಶದಲ್ಲಿಯೇ ತನ್ನ ಎಲ್ಲಾ ಪಂದ್ಯಗಳನ್ನು ಆಡಬೇಕೆಂದು ಐಸಿಸಿ ಮುಂದೆ ಪಿಸಿಬಿ ಪಟ್ಟು ಹಿಡಿಯುತ್ತಿದ್ದರೆ, ಮತ್ತೊಂದು ಕಡೆ ನಾವು ಪಾಕಿಸ್ತಾನಕ್ಕೆ ಬರಲ್ಲ, ನಮಗೆ ಹೈಬ್ರಿಡ್‌ ಮಾದಿಯಲ್ಲಿಯೇ ಪಂದ್ಯಗಳನ್ನು ಆಯೋಜಿಸಬೇಕೆಂದು ಭಾರತ ತಂಡ ಕೂಡ ಐಸಿಸಿ ಮುಂದೆ ಪಟ್ಟು ಹಿಡಿದಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ಈ ಬೇಡಿಕೆಗಳಿಂದ ಐಸಿಸಿ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದೆ. ಭಾರತಕ್ಕೆ ಸಪೋರ್ಟ್‌ ಮಾಡಬೇಕಾ? ಅಥವಾ ಪಾಕಿಸ್ತಾನಕ್ಕೆ ಸಪೋರ್ಟ್‌ ಮಾಡಬೇಕೆಂಬ ಚಿಂತೆ ಐಸಿಸಿಗೆ ಬಲವಾಗಿ ಕಾಡ್ತಾ ಇದೆ.

ಇದರ ನಡುವ ಚಾಂಪಿಯನ್ಸ್‌ ಟ್ರೋಫಿ ಆಯೋಜಿಸುವ ಸಂಬಂಧ ಶುಕ್ರವಾರ ಐಸಿಸಿಯು ತನ್ನ ಬೋರ್ಡ್‌ ಮೀಟಿಂಗ್‌ ನಿಗದಿಪಡಿಸಿತ್ತು ಹಾಗೂ ಟೂರ್ನಿಯನ್ನು ಹೈಬ್ರಿಡ್‌ ಮಾದರಿಯಲ್ಲಿ ನಡೆಸಬೇಕೆಂದು ಪಿಸಿಬಿಗೆ ಸೂಚನೆ ನೀಡಿತ್ತು. ಆದರೆ, ಪಿಸಿಬಿ ಇದನ್ನು ಸ್ವೀಕರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಐಸಿಸಿ ಬೋರ್ಡ್‌ ಮೀಟಿಂಗ್‌ನಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗದೆ, ಮೀಟಿಂಗ್‌ ಅನ್ನು ಶನಿವಾರಕ್ಕೆ ಮುಂದೂಡಲಾಗಿದೆ.

Champions Trophy: ಚಾಂಪಿಯನ್ಸ್​ ಟ್ರೋಫಿ ಆತಿಥ್ಯ ಕೈ ತಪ್ಪಿದರೆ ಪಾಕ್‌ಗೆ 548 ಕೋಟಿ ರೂ. ನಷ್ಟ

ಅಂದ ಹಾಗೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಅಂದೇರೇನು?…..ಏನಿದು ಚಾಂಪಿಯನ್ ಟ್ರೋಫಿ ವಿವಾದ?…..ಭಾರತದ ನಡೆ ಏನು?…..ಪಾಕಿಸ್ತಾನ ಏನು ಹೇಳುತ್ತಿದೆ?… ಭಾರತ ಹೋಗದಿದ್ದರೆ ಪಾಕಿಸ್ತಾನಕ್ಕೆ ಆಗುವ ನಷ್ಟ ಏನು?….ಏನಿದು ಹೈಬ್ರಿಡ್ ಮಾಡೆಲ್‌? ಇತ್ಯಾದಿ ಪ್ರಮುಖ ಅಂಶಗಳ ಬಗ್ಗೆ ಇದೀಗ ಸಂಪೂರ್ಣ ಮಾಹಿತಿಯನ್ನ ನಾವು ನಿಮಗೆ ಕೊಡ್ತೆವೆ….

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಅಂದೇರೇನು?

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯನ್ನು 50 ಓವರ್‌ಗಳ ಸ್ವರೂಪದಲ್ಲಿ ಆಡಿಸಲಾಗುತ್ತದೆ. ಆರಂಭದಲ್ಲಿ ಎರಡು ವರ್ಷಗಳ ಒಮ್ಮೆ ಟೂರ್ನಿಯನ್ನು ಆಯೋಜಿಸಲಾಗುತ್ತಿತ್ತು, ನಂತರ ನಾಲ್ಕು ವರ್ಷಗಳಿಗೆ ಒಮ್ಮೆ ಈ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಅಂದಹಾಗೆ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು ಮೊಟ್ಟ ಮೊದಲ ಬಾರಿ 1998ರಲ್ಲಿ ಆಯೋಜಿಸಲಾಗಿತ್ತು ಹಾಗೂ ಇಲ್ಲಿಯತನಕ ಎಂಟು ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಲಾಗಿದೆ. ಈ ಟೂರ್ನಿಯಲ್ಲಿ ಭಾರತ ತಂಡ ಎರಡು ಬಾರಿ ಚಾಂಪಿಯನ್‌ ಆಗಿ ಹೊರ ಹೊಮ್ಮಿದೆ. ಈ ಟೂರ್ನಿಯಿಂದ ಬರುವ ಆದಾಯವನ್ನು ಟೆಸ್ಟ್‌ ಆಡದ ಐಸಿಸಿ ಸದಸ್ಯ ರಾಷ್ಟ್ರಗಳಲ್ಲಿ ಕ್ರಿಕೆಟ್‌ ಬೆಳವಣಿಗೆ ಬಳಸಿಕೊಳ್ಳುವುದು ಇದರ ಪ್ರಮುಖ ಉದ್ದೇಶ.

ಏನಿದು ಚಾಂಪಿಯನ್ ಟ್ರೋಫಿ ವಿವಾದ?

ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಆತಿಥ್ಯದ ಹಕ್ಕುಗಳನ್ನು ಪಾಕಿಸ್ತಾನ ಪಡೆದುಕೊಂಡಿತ್ತು. ಅದರಂತೆ 1996ರ ಬಳಿಕ ಇದೇ ಮೊದಲ ಬಾರಿ ಐಸಿಸಿ ಟೂರ್ನಿಯನ್ನು ಆಯೋಜಿಸಲು ಪಾಕಿಸ್ತಾನ ತದಿಗಾಲಲ್ಲಿ ನಿಂತು ಕಾಯುತ್ತಿದೆ. ಆದರೆ, ರಾಜಕೀಯ ಭಿನ್ನಾಭಿಪ್ರಾಯಗಳಿಂದ ಭಾರತ ತಂಡ, ಪಾಕಿಸ್ತಾನ ಪ್ರವಾಸ ಮಾಡಲು ನಿರಾಕರಿಸಿದೆ ಹಾಗೂ ಹೈಬ್ರಿಡ್‌ ಮಾದರಿಯಲ್ಲಿ ನಮಗೆ ಪಂದ್ಯಗಳನ್ನು ಆಯೋಜಿಸಬೇಕೆಂದು ಪಟ್ಟು ಹಿಡಿದಿದೆ. ಆದರೆ, ನಾವು ಹೈಬ್ರಿಡ್‌ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸಲ್ಲ, ಭಾರತ ಕಡ್ಡಾಯವಾಗಿ ಪಾಕಿಸ್ತಾನ್ಕೆ ಬಂದು ಪಂದ್ಯಗಳನ್ನು ಆಡಲೇಬೇಕೆಂದು ಪಿಸಿಬಿ ಕಿರಿಕ್‌ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಆತಿಥ್ಯದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯು ವಿವಾದವಾಗಿ ಮಾರ್ಪಟ್ಟಿದೆ.

ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ಭಾರತ ಹಿಂದೇಟು ಹಾಕುತ್ತಿರುವುದು ಏಕೆ?

ಭಾರತ ಹಾಗೂ ಪಾಕಿಸ್ತಾನ ರಾಜಕೀಯ ಸಂಬಂಧ ತೀರಾ ಹದಗೆಟ್ಟಿದೆ. 2005-06ರ ಸಾಲಿನಲ್ಲಿ ಕೊನೆಯ ಬಾರಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಮಾಡಿತ್ತು. ಸಾಂಪ್ರಾದಾಯಿಕ ಎದುರಾಳಿ ತಂಡಗಳು 2012-13ರ ಸಾಲಿನಲ್ಲಿ ಕೊನೆಯ ಬಾರಿ ದ್ವಿಪಕ್ಷೀಯ ಸರಣಿಯನ್ನು ಆಡಿದ್ದವು. ಈ ವೇಳೆ ಪಾಕಿಸ್ತಾನ ತಂಡ, ಭಾರತಕ್ಕೆ ಆಗಮಿಸಿತ್ತು. ಆದರೆ, ಮುಂಬೈ ಸ್ಪೋಟದ ಬಳಿಕ ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರಗಳ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳು ಉಂಟಾಗಿವೆ. ಅಂದಿನಿಂದ ಇಲ್ಲಿಯವರೆಗೂ ಇಂಡೋ-ಪಾಕ್‌ ನಡುವೆ ದ್ವಿಕ್ಷೀಯ ಸರಣಿಗಳು ನಡೆಯುತ್ತಿಲ್ಲ ಹಾಗೂ ಕೇವಲ ಐಸಿಸಿ ಮತ್ತು ಏಷ್ಯಾ ಆಯೋಜನೆಯ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.

Champions Trophy Schedule: ಇನ್ನೆರಡು ದಿನದಲ್ಲಿ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಪ್ರಕಟ

ಚಾಂಪಿಯನ್ಸ್‌ ಟ್ರೋಫಿ ವಿವಾದದ ಬಗ್ಗೆ ಭಾರತದ ನಡೆ ಏನು?

ರಾಜಕೀಯ ಕಾರಣಗಳಿಂದ ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿನ ತನ್ನ ಪಂದ್ಯಗಳನ್ನು ಹೈಬ್ರಿಡ್‌ ಮಾದರಿಯಲ್ಲಿ ನಡೆಸಬೇಕೆಂದು ಐಸಿಸಿಗೆ ಬಿಸಿಸಿಐಗೆ ಮನವಿ ಮಾಡಿದೆ. ಅಂದರೆ…ಭಾರತ ತಂಡದ ಪಂದ್ಯಗಳನ್ನು ಯುಎಇಯಲ್ಲಿ ನಡೆಸಬೇಕೆಂದು ಬಿಸಿಸಿಐ ಒತ್ತಾಯಿಸಿದೆ.

ಚಾಂಪಿಯನ್ಸ್‌ ಟ್ರೋಫಿ ಬಗ್ಗೆ ಪಾಕಿಸ್ತಾನದ ಡಿಮ್ಯಾಂಡ್‌ ಏನು?

ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು ಆಡಲು ಭಾರತ ತಂಡ, ಪಾಕಿಸ್ತಾನಕ್ಕೆ ಕಡ್ಡಾಯವಾಗಿ ಬರಲೇಬೇಕು ಎಂದು ಐಸಿಸಿಗೆ ಪಿಸಿಬಿ ಡಿಮ್ಯಾಂಡ್‌ ಮಾಡಿದೆ. ವಿಶ್ವಕಪ್‌ ಟೂರ್ನಿಗಳನ್ನು ಆಡಲು ನಾವು ಭಾರತಕ್ಕೆ ಪ್ರವಾಸ ಮಾಡಿದ್ದೇವೆ, ಅದೇ ರೀತಿ ಇದೀಗ ಭಾರತ ತಂಡ ಕೂಡ ಪಾಕಿಸ್ತಾನಕ್ಕೆ ಬರಲೇಬೇಕು. ಐಸಿಸಿ ಈ ವಿಷಯದಲ್ಲಿ ಮಲ ತಾಯಿ ಧೋರಣೆ ಅನುಸರಿಸಬಾರದು. ಭಾರತಕ್ಕೆ ಏನೇ ಸಮಸ್ಯೆ ಇದ್ದರೂ ನಾವು ಪರಿಹರಿಸುತ್ತೇವೆ. ಈ ವಿಷಯದಲ್ಲಿ ಬಿಸಿಸಿಐ ನಮ್ಮ ಬಳಿ ಮುಕ್ತವಾಗಿ ಮಾತನಾಡಬೇಕು. ಏನೇ ಆಗಲಿ ಹೈಬ್ರಿಡ್‌ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸುವುದಿಲ್ಲ. ಒಂದು ವೇಳೆ ಹೈಬ್ರಿಡ್‌ ಮಾದರಿಯಲ್ಲಿಯೇ ಟೂರ್ನಿಯನ್ನು ನಡೆಸಬೇಕೆಂದರೆ, ಪಾಕಿಸ್ತಾನ ತಂಡ ಈ ಟೂರ್ನಿಯನ್ನು ಬಹಿಷ್ಕರಿಸಲಿದೆ ಎಂದು ಐಸಿಸಿಗೆ ಪಿಸಿಬಿಗೆ ವಾರ್ನಿಂಗ್‌ ಕೊಟ್ಟಿದೆ.

Champions Trophy: ಚಾಂಪಿಯನ್ಸ್‌ ಟ್ರೋಫಿ ದಕ್ಷಿಣ ಆಫ್ರಿಕಾಗೆ ಶಿಫ್ಟ್‌? ಪಾಕಿಸ್ತಾನಕ್ಕೆ ಐಸಿಸಿ ವಾರ್ನಿಂಗ್‌!

ಚಾಂಪಿಯನ್ಸ್‌ ಟ್ರೋಫಿ ಆತಿಥ್ಯ ಕಳೆದುಕೊಂಡ್ರೆ ಪಾಕಿಸ್ತಾನಕ್ಕೆ ಆಗುವ ನಷ್ಟ ಏನು?

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ನಿಮಿತ್ತ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಕಳೆದ ಒಂದು ವರ್ಷದಿಂದ ಸಜ್ಜಾಗುತ್ತಿದೆ ಹಾಗೂ ನೂರಾರು ಕೋಟಿ ರೂ ಗಳನ್ನು ಖರ್ಚು ಮಾಡಿ ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿಯ ಸ್ಟೇಡಿಯಂಗಳ ದುರಸ್ತಿಯನ್ನು ಮಾಡಿದೆ. ಇದೀಗ ಪಾಕಿಸ್ತಾನ ಹೈಬ್ರಿಡ್‌ ಮಾದರಿಯನ್ನು ಸ್ವೀಕರಿಸಿಲ್ಲವಾದರೆ, ಐಸಿಸಿಯು ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಆತಿಥ್ಯವನ್ನು ಬೇರೆ ರಾಷ್ಟ್ರಕ್ಕೆ ನೀಡಬಹುದು. ಒಂದು ವೇಳೆ ಇದು ಸಂಭವಿಸಿದರೆ ಪಾಕಿಸ್ತಾನಕ್ಕೆ ಭಾರಿ ನಷ್ಟ ಉಂಟಾಗಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಮಟ್ಟದಲ್ಲಿ ಮುಖಭಂಗ ಅನುಭವಿಸುವ ಜತೆಗೆ ಬರೋಬ್ಬರಿ 548 ಕೋಟಿ ರೂ.ಗಳ ನಷ್ಟ ಪಿಸಿಬಿಗೆ ಉಂಟಾಗಲಿದೆ ಎಂದು ವರದಿಯಾಗಿದೆ.

ಹೈಬ್ರಿಡ್‌ ಮಾಡೆಲ್‌ ಎಂದರೇನು?

ಹೈಬ್ರಿಡ್‌ ಫಾರ್ಮುಲಾ ಎಂದರೆ ಟೂರ್ನಿ ಆಯೋಜಿಸುವ ಆತಿಥ್ಯ ದೇಶದಲ್ಲಿ ಆಡದೆ ತಟಸ್ಥ ಸ್ಥಳದಲ್ಲಿ ತನ್ನ ಪಂದ್ಯಗಳನ್ನು ಆಡುವುದಾಗಿದೆ. ಉದಾಹರಣೆಗೆ ಭಾರತ ತಂಡ, ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯಗಳನ್ನು ಆಡಲು ಪಾಕಿಸ್ತಾನಕ್ಕೆ ಹೋಗದೆ, ತಟಸ್ಥ ಸ್ಥಳಗಳಲ್ಲಿ ಅಂದರೆ ಯುಎಇ ಅಥವಾ ಬೇರೆ ಯಾವುದಾದರೂ ಸ್ಥಳಗಳಲ್ಲಿ ಪಂದ್ಯಗಳನ್ನು ಆಡುವುದು. ಕಳೆದ ವರ್ಷ ಏಷ್ಯಾ ಕಪ್‌ ಟೂರ್ನಿಯು ಕೂಡ ಪಾಕಿಸ್ತಾನದ ಆತಿಥ್ಯದಲ್ಲಿಯೇ ನಡೆದಿತ್ತು. ಆದರೆ, ಭಾರತ ತಂಡದ ಪಂದ್ಯಗಳು ಹೈಬ್ರಿಡ್‌ ಮಾಡೆಲ್‌ನಲ್ಲಿ ನಡೆದಿತ್ತು. ಭಾರತ ತಂಡ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು.