Saturday, 23rd November 2024

ಅಮೆರಿಕ ಓಪನ್ ಟೆನಿಸ್ ಟೂರ್ನಿ: ಎಂಟರಘಟ್ಟಕ್ಕೆ ಮುನ್ನಡೆದ ನೊವಾಕ್ ಜೊಕೊವಿಚ್‌

ನ್ಯೂಯಾರ್ಕ್‌: 21ನೇ ಗ್ರ್ಯಾನ್‌ಸ್ಲಾಮ್‌ ಜಯದತ್ತ ನೊವಾಕ್ ಜೊಕೊವಿಚ್‌ ಮುನ್ನಡೆದರು. ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಜೆನ್ಸನ್‌ ಬ್ರೂಕ್ಸ್‌ಬೈ ಅವರನ್ನು ಮಣಿಸಿ ಎಂಟರಘಟ್ಟಕ್ಕೆ ಮುನ್ನಡೆದಿದ್ದಾರೆ.

ಜೆನ್ಸನ್‌ ಅವರ ಸೋಲಿನೊಂದಿಗೆ, ಇದೇ ಮೊದಲ ಬಾರಿಗೆ ಅಮೆರಿಕದ ಯಾವ ಆಟಗಾರರೂ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಇಲ್ಲದಂತಾಗಿದೆ. 1881ರಲ್ಲಿ ಅಮೆರಿಕ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಎಂಬ ಹೆಸರಿನಿಂದ ಆರಂಭವಾದ ಟೂರ್ನಿ ಯಲ್ಲಿ ಇದುವರೆಗೆ ಆ ದೇಶದ 85 ಪುರುಷರು ಮತ್ತು 92 ಮಹಿಳೆಯರು ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದರು.

ಅರ್ಥರ್‌ ಆಯಷ್‌ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಮೊದಲ ಸೆಟ್‌ಅನ್ನು ಕಳೆದುಕೊಂಡರೂ ಎದೆಗುಂದದ ಜೊಕೊ ವಿಚ್‌ 1-6, 6-3, 6-2, 6-2ರಿಂದ ಜೆನ್ಸನ್‌ ಎದುರು ಗೆದ್ದು ಬೀಗಿದರು. ಜೆನ್ಸನ್ ಮೊದಲ ಸೆಟ್‌ನಲ್ಲಿ ಕೇವಲ ಒಂದು ಲೋಪ ಎಸಗಿದರೆ, ಜೊಕೋವಿಚ್‌ 11 ಬಾರಿ ತಪ್ಪು ಮಾಡಿದರು. ಇನ್ನುಳಿದ ಮೂರು ಸೆಟ್‌ಗಳಲ್ಲಿ ಜೊಕೊವಿಚ್‌ ಸಂಪೂರ್ಣ ಪಾರಮ್ಯ ಮೆರೆದರು.

ಮುಂದಿನ ಪಂದ್ಯದಲ್ಲಿ ಸರ್ಬಿಯಾ ಆಟಗಾರನಿಗೆ ಇಟಲಿಯ ಮ್ಯಾಟಿಯೊ ಬೆರೆಟಿನಿ ಸವಾಲು ಎದುರಾಗಿದೆ. ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್‌ 6-4, 6-4, 7-6 (9/7)ರಿಂದ ಇಟಲಿಯ ಜಾನಿಕ್ ಸಿನ್ನರ್ ಎದುರು ಜಯಿಸಿ ಎಂಟರ ಘಟ್ಟ ತಲುಪಿ ದರು.

ಮಹಿಳಾ ಸಿಂಗಲ್ಸ್‌ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಗ್ರೀಸ್‌ನ ಮರಿಯಾ ಸಕರಿ 6-7 (2), 7-6 (6), 6-3ರಿಂದ 2019ರ ಚಾಂಪಿಯನ್ ಕೆನಡಾದ ಬಿಯಾಂಕಾ ಆಯಂಡ್ರಿಸ್ಕೂ ಅವರನ್ನು ಮಣಿಸಿದರು. ಸ್ವಿಟ್ಜರ್ಲೆಂಡ್‌ನ ಬೆಲಿಂಡಾ ಬೆನ್ಸಿಚ್‌ 7-6 (14/12), 6-3ರಿಂದ ಪೋಲೆಂಡ್‌ನ ಇಗಾ ಸ್ವೆಟೆಕ್ ಎದುರು, ಜೆಕ್ ಗಣ ರಾಜ್ಯದ ಕರೋಲಿನಾ ಪ್ಲಿಸ್ಕೊವಾ 7-5, 6-4ರಿಂದ ರಷ್ಯಾದ ಅನಸ್ತೇಸಿಯಾ ಪಾವ್ಲಿಚೆಂಕೊವ ಎದುರು ಜಯಿಸಿ ಕ್ವಾರ್ಟರ್‌ಫೈನಲ್ ತಲುಪಿದರು.