Saturday, 21st December 2024

Vijay Hazare Trophy: ಶ್ರೀಜಿತ್‌ ಶತಕದ ಬಲದಿಂದ ಮುಂಬೈ ವಿರುದ್ಧ ಗೆದ್ದು ಬೀಗಿದ ಕರ್ನಾಟಕ!

Vijay Hazare Trophy: Centurion Shrijith guides Karnataka to seven-wicket win over Mumbai

ಅಹಮದಾಬಾದ್‌: ಶನಿವಾರ ಆರಂಭವಾಗಿರುವ 2024-25ರ ಸಾಲಿನ ವಿಜಯ್‌ ಹಝಾರೆ ಟ್ರೋಫಿ (Vijay Hazare Trophy) 50 ಓವರ್‌ಗಳ ದೇಶಿ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡ ಶುಭಾರಂಭ ಕಂಡಿದೆ. ಕೆಎಲ್‌ ಶ್ರೀಜಿತ್‌ (150 ರನ್‌) ಅವರ ಭರ್ಜರಿ ಶತಕದ ಬಲದಿಂದ ಕರ್ನಾಟಕ ತಂಡ, ಬಲಿಷ್ಠ ಮುಂಬೈ ಎದುರು 7 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಖಾತೆ ತೆರೆದಿದೆ.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದ ಬಿ ಗ್ರೌಂಡ್‌ನಲ್ಲಿ ನಡೆದಿದ್ದ ಸಿ ಗುಂಪಿನ ಮೊದಲ ಸುತ್ತಿನ ಪಂದ್ಯದಲ್ಲಿ ಮುಂಬೈ ನೀಡಿದ್ದ 383 ರನ್‌ಗಳ ಸವಾಲಿನ ಗುರಿಯನ್ನು ಹಿಂಬಾಲಿಸಿದ್ದ ಕರ್ನಾಟಕ ತಂಡ ತನ್ನ ಸ್ಪೋಟಕ ಬ್ಯಾಟಿಂಗ್‌ ಬಲದಿಂದ 46.2 ಓವರ್‌ಗಳಿಗೆ ಕೇವಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ನಗೆ ಬೀರಿತು. ಕರ್ನಾಟಕ ಪರ ಕೆಎಲ್‌ ಶ್ರೀಜಿತ್‌ ಜತೆಗೆ ಅನೀಶ್‌ ಕೆವಿ (82 ರನ್)‌ ಹಾಗೂ ಪ್ರವೀಣ್‌ ದುಬೆ (65) ಅವರು ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು.

ಮುಂಬೈ ನೀಡಿದ್ದ ಬೃಹತ್‌ ಮೊತ್ತದ ಗುರಿಯನ್ನು ಹಿಂಬಾಲಿಸಿದ್ದ ಕರ್ನಾಟಕ ತಂಡದ ಪರ ನಾಯಕ ಮಯಾಂಕ್‌ ಅಗರ್ವಾಲ್‌ ಅವರ ಜೊತೆ ಇನಿಂಗ್ಸ್‌ ಆರಂಭಿಸಿದ್ದ ನಿಕಿನ್‌ ಜೋಸ್‌ ಕೇವಲ 13 ಎಸೆತಗಳಲ್ಲಿ 21 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಇದಾದ ಬಳಿಕ ಸಮಯೋಜಿತ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ನಾಯಕ ಮಯಾಂಕ್‌ ಅಗರ್ವಾಲ್‌, 48 ಎಸೆತಗಳಲ್ಲಿ 47 ರನ್‌ ಗಳಿಸಿ ಶಿವಂ ದುಬೆಗೆ ವಿಕೆಟ್‌ ಒಪ್ಪಿಸಿದರು. ಈ ವೇಳೆ ಕರ್ನಾಟಕ ತಂಡ 14.3 ಓವರ್‌ಗಳಿಗೆ 106 ರನ್‌ಗಳನ್ನು ಕಲೆ ಹಾಕಿ ಉತ್ತಮ ಆರಂಭ ಪಡೆದಿತ್ತು.

ಕೆಎಲ್‌ ಶ್ರೀಜಿತ್‌ ಭರ್ಜರಿ ಶತಕ

ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಕೆಎಲ್‌ ಶ್ರೀಜಿತ್‌ ಸೋಗಸಾದ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಆಡಿದ್ದ 101 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ ಹಾಗೂ 20 ಬೌಂಡರಿಗಳೊಂದಿಗೆ ಅಜೇಯ 150 ರನ್‌ ಗಳನ್ನು ಸಿಡಿಸಿದರು. ಆ ಮೂಲಕ ಕರ್ನಾಟಕ ತಂಡದ 7 ವಿಕೆಟ್‌ಗಳಿಂದ ಗೆಲುವು ಪಡೆಯಲು ನೆರವು ನೀಡಿದರು. ಇದರ ಜೊತೆಗೆ 66 ಎಸೆತಗಳಲ್ಲಿ 82 ರನ್‌ಗಳನ್ನು ಸಿಡಿಸಿದ್ದ ಕೆವಿ ಅನೀಸ್‌ ಅವರ ಜೊತೆ ಶ್ರೀಜಿತ್‌ ಮುರಿಯದ ನಾಲ್ಕನೇ ವಿಕೆಟ್‌ಗೆ 94 ರನ್‌ಗಳನ್ನು ಜೊತೆಯಾಟವನ್ನು ಆಡಿದರು. ಕೊನೆಯ ಹಂತದಲ್ಲಿ ಶ್ರೀಜಿತ್‌ ಜೊತೆಗೆ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಪ್ರವೀಣ್‌ ದುಬೆ 50 ಎಸೆತಗಳಲ್ಲಿ ಅಜೇಯ 65 ರನ್‌ಗಳನ್ನು ಸಿಡಿಸಿದರು. ಅಲ್ಲದೆ ಈ ಜೋಡಿ ಮೂರನೇ ವಿಕೆಟ್‌ಗೆ 183 ರನ್‌ಗಳ ಜೊತೆಯಾಟವನ್ನು ಆಡಿತ್ತು.

ಶ್ರೇಯಸ್‌ ಅಯ್ಯರ್‌ ಶತಕ ವ್ಯರ್ಥ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಮುಂಬೈ ತಂಡದ ಪರ ಬ್ಯಾಟಿಂಗ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ಟೀಮ್‌ ಇಂಡಿಯಾ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಸ್ಪೋಟಕ ಆಟ. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಶ್ರೇಯಸ್‌ ಅಯ್ಯರ್‌, ಆರಂಭದಿಂದಲೂ ಸ್ಪೋಟಕ ಬ್ಯಾಟಿಂಗ್‌ಗೆ ಕೈ ಹಾಕಿದರು. ಕರ್ನಾಟಕ ಬೌಲರ್‌ಗಳ ಬೆವರಿಳಿಸಿದ ಶ್ರೇಯಸ್‌ ಅಯ್ಯರ್‌, 55 ಎಸೆತಗಳಲ್ಲಿ ಬರೋಬ್ಬರಿ 10 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 114 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಮುಂಬೈ ತಂಡ, ತನ್ನ ಪಾಲಿನ 50 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 382 ರನ್‌ಗಳನ್ನು ಕಲೆ ಹಾಕಿತು. ಆದರೂ ಈ ಮೊತ್ತಕ್ಕೆ ಕರ್ನಾಟಕವನ್ನು ಕಟ್ಟಿ ಹಾಕುವಲ್ಲಿ ಮುಂಬೈ ಬೌಲರ್‌ಗಳು ವಿಫಲರಾದರು.

ಶ್ರೇಯಸ್‌ ಅಯ್ಯರ್‌ ಜತೆಗೆ ಮುಂಬೈ ಪರ ಅತ್ಯುತ್ತಮ ಬ್ಯಾಟ್‌ ಮಾಡಿದ್ದ ಆಯುಷ್‌ ಮಾಥ್ರೆ 78 ರನ್‌ ಗಳಿಸಿದರೆ, ಹಾರ್ದಿಕ್‌ ತೋಮರ್‌ 84 ರನ್‌ ಹಾಗೂ ಶಿವಂ ದುಬೆ 63 ರನ್‌ಗಳನ್ನು ಸಿಡಿಸಿದರು.

ಈ ಸುದ್ದಿಯನ್ನು ಓದಿ: Vijay Hazare Trophy: ಶ್ರೇಯಸ್‌ ಅಯ್ಯರ್‌ ಶತಕ; ಕರ್ನಾಟಕಕ್ಕೆ ಬೃಹತ್‌ ಗುರಿ