Friday, 29th November 2024

Virat Kohli: ನೆಟ್ಸ್‌ನಲ್ಲೂ ಮುಂದುವರಿದ ಕೊಹ್ಲಿಯ ಕಳಪೆ ಬ್ಯಾಟಿಂಗ್‌; 15 ಎಸೆತದಲ್ಲಿ 4 ಬಾರಿ ಔಟ್‌

Virat Kohli

ಕಾನ್ಪುರ: ಬಾಂಗ್ಲಾದೇಶ(IND vs BAN 2nd Test) ವಿರುದ್ಧ ಚೆನ್ನೈಯಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಘೋರ ಬ್ಯಾಟಿಂಗ್‌ ವೈಫಲ್ಯ ಎದುರಿಸಿದ್ದ ವಿರಾಟ್‌ ಕೊಹ್ಲಿ(Virat Kohli) ಇದೀಗ ದ್ವಿತೀಯ ಟೆಸ್ಟ್‌ಗೆ ನಡೆಸಿದ ಅಭ್ಯಾಸದಲ್ಲಿಯೂ ಕಳಪೆ ಬ್ಯಾಟಿಂಗ್‌ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ನಾಳೆಯಿಂದ ಕಾನ್ಪುರದ ಗ್ರೀನ್‌ ಪಾರ್ಕ್‌ನಲ್ಲಿ ದ್ವಿತೀಯ ಟೆಸ್ಟ್‌ ಪಂದ್ಯ ಆರಂಭಗೊಳ್ಳಲಿದೆ. ಈ ಪಂದ್ಯಕ್ಕೆ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ಕೊಹ್ಲಿ ವೇಗಿ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಎಸೆತದ 15 ಎಸೆತಗಳಲ್ಲಿ 4 ಬಾರಿ ವಿಕೆಟ್‌ ಔಟ್‌ ಆಗಿದ್ದಾರೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಜತೆಗೆ ನೆಟ್‌ ಬೌಲರ್‌ಗಳನ್ನು ಕೂಡ ಸಮರ್ಥವಾಗಿ ಎದುರಿಸಲು ಪರದಾಡಿದ್ದಾರೆ ಎನ್ನಲಾಗಿದೆ. ಮೊದಲ ಪಂದ್ಯದಲ್ಲಿ ಕ್ರಮವಾಗಿ 6 ಮತ್ತು17 ರನ್‌ ಬಾರಿಸಿ ವಿಕೆಟ್‌ ಕೈಚೆಲ್ಲಿದ್ದರು.

ವಿರಾಟ್ ಈ ವರ್ಷ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಕಳಪೆ ಫಾರ್ಮ್ ಹೊಂದಿದ್ದಾರೆ. ಈ ವರ್ಷ 15 ಪಂದ್ಯಗಳು ಮತ್ತು 17 ಇನ್ನಿಂಗ್ಸ್‌ಗಳಲ್ಲಿ, ಅವರು 18.76 ರ ಸರಾಸರಿಯಲ್ಲಿ ಕೇವಲ 319 ರನ್‌ಗಳನ್ನು ಗಳಿಸಿದ್ದಾರೆ. ಕೇವಲ ಒಂದು ಅರ್ಧ ಶತಕ ಮಾತ್ರ ಬಾರಿಸಿದ್ದಾರೆ. ಇದು ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ T20 ವಿಶ್ವಕಪ್ ಫೈನಲ್‌ನಲ್ಲಿ ದಾಖಲಾಗಿತ್ತು. ಈ ಪಂದ್ಯದಲ್ಲಿ ಕೊಹ್ಲಿ 76 ರನ್‌ ಬಾರಿಸಿದ್ದರು. ಕೊಹ್ಲಿ ದ್ವಿತೀಯ ಪಂದ್ಯದಲ್ಲಿಯೂ ಕಳಪೆ ಬ್ಯಾಟಿಂಗ್‌ ನಡೆಸಿದ್ದೇ ಆದಲ್ಲಿ ಅವರ ವಿರುದ್ಧ ಕೆಲ ಮಾಜಿ ಆಟಗಾರರು ಮತ್ತೆ ಟೀಕೆಯ ಸುರಿಮಳೆ ಸುರಿಸುವುದು ಖಚಿತ ಎನ್ನಲಡ್ಡಿಯಿಲ್ಲ.

ಇದನ್ನೂ ಓದಿ Virat Kohli: ಕೊಹ್ಲಿಯ ಚಿತ್ರಕಲೆ ಕಂಡು ಕಂಗಾಲಾದ ಅಭಿಮಾನಿಗಳು; ವಿಡಿಯೊ ವೈರಲ್‌

ದಾಖಲೆಯ ಸನಿಹ ಕೊಹ್ಲಿ

ವಿರಾಟ್‌ ಕೊಹ್ಲಿ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ 129 ರನ್‌ ಬಾರಿಸಿದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ ಕ್ಲಬ್‌ ಸೇರಲಿದ್ದಾರೆ. ಆಗ ಅವರು 9 ಸಾವಿರ ರನ್‌ ಗಳಿಸಿದ ಭಾರತದ 4ನೇ ಕ್ರಿಕೆಟಿಗನಾಗಿ ಮೂಡಿಬರಲಿದ್ದಾರೆ. ಉಳಿದವರೆಂದರೆ ಸಚಿನ್‌ ತೆಂಡೂಲ್ಕರ್‌ (15,921), ರಾಹುಲ್‌ ದ್ರಾವಿಡ್‌ (13,265) ಮತ್ತು ಸುನೀಲ್‌ ಗಾವಸ್ಕರ್‌ (10,122).

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27,000 ರನ್‌ಗಳನ್ನು ಪೂರೈಸಲು ಕೊಹ್ಲಿಗೆ ಇನ್ನು 35 ರನ್‌ಗಳ ಅಗತ್ಯವಿದೆ. ದ್ವಿತೀಯ ಟೆಸ್ಟ್‌ನಲ್ಲಿ ಕೊಹ್ಲಿ 35 ರನ್‌ ಬಾರಿಸಿದರೆ 147 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ಇತಿಹಾಸದಲ್ಲಿ ವೇಗವಾಗಿ 27,000 ರನ್‌ಗಳನ್ನು ಪೂರೈಸಿದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಸದ್ಯ ದಾಖಲೆ ಸಚಿನ್‌ ಹೆಸರಿನಲ್ಲಿದೆ. ಸಚಿನ್‌ 623 ಇನಿಂಗ್ಸ್‌ಗಳಲ್ಲಿಈ ಮೈಲುಗಲ್ಲು ನಿರ್ಮಿಸಿದ್ದರು. ಕೊಹ್ಲಿ ಈಗಾಗಲೇ 592 ಇನಿಂಗ್ಸ್‌ಗಳಿಂದ 26,965 ರನ್‌ಗಳನ್ನು ಗಳಿಸಿದ್ದಾರೆ.