Friday, 13th December 2024

Virender Sehwag: 45ನೇ ವಸಂತಕ್ಕೆ ಕಾಲಿಟ್ಟ ವೀರೇಂದ್ರ ಸೆಹ್ವಾಗ್‌

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌(Virender Sehwag) ಭಾನುವಾರ 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ(Happy Birthday Virender Sehwag) ಅಂಗವಾಗಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ), ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್, ಯುವರಾಜ್ ಸಿಂಗ್, ಸುರೇಶ್ ರೈನಾ, ಶಿಖರ್ ಧವನ್ ಸೇರಿದಂತೆ ಹಲವು ಗಣ್ಯರು ಟ್ವಿಟರ್‌ನಲ್ಲಿ ಶುಭ ಹಾರೈಸಿದ್ದಾರೆ.

2007ರ ಟಿ20 ವಿಶ್ವಕಪ್‌, 2011ರ ವಿಶ್ವಕಪ್‌ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ ವೀರೇಂದ್ರ ಸೆಹ್ವಾಗ್ ಅವರಿಗೆ ಹುಟ್ಟುಹಬ್ಬ ಶುಭಾಶಯ ಎಂದು ಬಿಬಿಸಿಐ ಟ್ವೀಟ್‌ ಮಾಡಿದೆ. ಹುಟ್ಟುಹಬ್ಬದ ಶುಭಾಶಯಗಳು ವೀರೂ ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ. ಸಾರ್ವಕಾಲಿಕ ಸ್ಫೋಟಕ ಹಾಗೂ ಚಮತ್ಕಾರಿ ಬ್ಯಾಟರ್‌ ವೀರೇಂದ್ರ ಸೆಹ್ವಾಗ್ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮಗೆ ಸದಾಕಾಲಪ್ರೀತಿ ಮತ್ತು ಉತ್ತಮ ಆರೋಗ್ಯ ದೊರೆಯಲಿ ಎಂದು ಆಶಿಸುತ್ತೇನೆಎಂದು ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ IND vs NZ: ಸೋಲಿನ ಭೀತಿಯಲ್ಲಿ ಭಾರತ

ಕಳೆದ ವರ್ಷ ಕ್ರಿಕೆಟ್‌ ವೃತ್ತಿಬದುಕಿನಲ್ಲಿ ತೋರಿದ ಸಾಧನೆಯನ್ನು ಪರಿಗಣಿಸಿ ಸೆಹವಾಗ್‌ಗೆ ಐಸಿಸಿ ಹಾಲ್‌ ಆಫ್‌ ಫೇಮ್‌ ಗೌರವ ನೀಡಿತ್ತು. ಆಧುನಿಕ ಕ್ರಿಕೆಟ್‌ನ ಸ್ಫೋಟಕ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ಸೆಹ್ವಾಗ್‌ ಅವರು 1999 ರಿಂದ 2013ರ ವರೆಗೆ ರಾಷ್ಟ್ರೀಯ ತಂಡದಲ್ಲಿ ಆಡಿದ್ದರು. 104 ಟೆಸ್ಟ್‌ಗಳನ್ನು ಆಡಿರುವ ಅವರು 23 ಶತಕಗಳನ್ನು ಒಳಗೊಂಡಂತೆ 8,586 ರನ್‌ ಪೇರಿಸಿದ್ದಾರೆ.

2008 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಚೆನ್ನೈನಲ್ಲಿ ಅವರು ಗಳಿಸಿದ್ದ 319 ರನ್‌ಗಳು, ಭಾರತದ ಪರ ಟೆಸ್ಟ್‌ನಲ್ಲಿ ದಾಖಲಾದ ಗರಿಷ್ಠ ಸ್ಕೋರ್‌ ಎನಿಸಿದೆ. 2004ರಲ್ಲಿ ಪಾಕಿಸ್ತಾನದ ಮುಲ್ತಾನ್‌ನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಸೆಹವಾಗ್‌ ತ್ರಿಶತಕ ಬಾರಿಸಿದ್ದರು. ಇದೇ ಕಾರಣಕ್ಕೆ ಅವರನ್ನು “ಮುಲ್ತಾನ್ ಕಾ ಸುಲ್ತಾನ್” ಎಂದು ಕರೆಯಲಾಗುತ್ತದೆ. ಸಚಿನ್‌ ತೆಂಡೂಲ್ಕರ್‌ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಎರಡನೇ ಬ್ಯಾಟರ್‌ ಎಂಬ ದಾಖಲೆಯೂ ಸೆಹವಾಗ್‌ ಹೆಸರಿನಲ್ಲಿದೆ.

ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್‌) ಪ್ರಾಂಚೈಸಿಗಳಾದ ಡೆಲ್ಲಿ ಕ್ಯಾಪಿಟಲ್ಸ್‌, ಮುಂಬೈ ಇಂಡಿಯನ್ಸ್, ಕೋಲ್ಕತ್ತ ನೈಟ್‌ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಟ್ವಿಟರ್‌ನಲ್ಲಿ ಶುಭ ಕೋರಿದೆ. 2015ರ ಅ.20ರಂದು ಅಂತರರಾಷ್ಟ್ರೀಯ ಕ್ರಿಕೆಟಿನ ಎಲ್ಲ ಮಾದರಿಯ ಆಟಕ್ಕೂ ವಿದಾಯ ಘೋಷಿಸಿದ್ದರು.