Saturday, 14th December 2024

ಲಾಬುಷೇನ್ ಶತಕ: ಪಾದಾರ್ಪಣಾ ಪಂದ್ಯದಲ್ಲಿ ಮಿಂಚಿದ ವಾಷಿಂಗ್ಟನ್, ನಟರಾಜನ್

ಬ್ರಿಸ್ಬೇನ್‌: ಪ್ರವಾಸಿ ಭಾರತ ವಿರುದ್ಧ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿರುವ ಆಸ್ಟ್ರೇಲಿಯಾ, ಮಾರ್ನಸ್ ಲಾಬುಷೇನ್ ಆಕರ್ಷಕ ಶತಕದ (108) ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ 87 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿದೆ.

ಸತತ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಟೀಮ್ ಇಂಡಿಯಾ ಆಡುಗ ಬಳಗದಲ್ಲಿ ಬದಲಾವಣೆ ತರುವುದು ಅನಿವಾರ್ಯ ವೆನಿಸಿತ್ತು. ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಲ್ಲಿ ಪ್ರಮುಖವಾಗಿಯೂ ನಾಲ್ಕು ಬದಲಾವಣೆಗಳನ್ನು ತರಲಾಗಿತ್ತು. ಗಾಯದ ಸಮಸ್ಯೆಗೆ ಸಿಲುಕಿರುವ ಜಸ್‌ಪ್ರೀತ್ ಬೂಮ್ರಾ, ರವಿಚಂದ್ರನ್ ಅಶ್ವಿನ್, ಹನುಮ ವಿಹಾರಿ ಹಾಗೂ ರವೀಂದ್ರ ಜಡೇಜ ಅಲಭ್ಯರಾದ ಹಿನ್ನೆಲೆಯಲ್ಲಿ ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಮಯಂಕ್ ಅಗರವಾಲ್ ಮತ್ತು ತಂಗರಸು ನಟರಾಜನ್ ಆಡುವ ಬಳಗದಲ್ಲಿ ಕಾಣಿಸಿಕೊಂಡರು.

ಈ ಪೈಕಿ ವಾಷಿಂಗ್ಟನ್ ಸುಂದರ್ ಹಾಗೂ ಟಿ. ನಟರಾಜನ್ ಪದಾರ್ಪಣೆ ಪಂದ್ಯದಲ್ಲಿ ವಿಕೆಟ್ ಕಬಳಿಸಿ ಗಮನ ಸೆಳೆದರು.

ಭಾರತದ ಅನನುಭವಿ ಬೌಲಿಂಗ್ ಪಡೆಯನ್ನು ಮೊಹಮ್ಮದ್ ಸಿರಾಜ್ ಮುನ್ನಡೆಸಿದರು. ಅಲ್ಲದೆ ಮೊದಲ ಓವರ್‌ನಲ್ಲೇ ಅಪಾಯಕಾರಿ ಡೇವಿಡ್ ವಾರ್ನರ್ ವಿಕೆಟ್ ಪಡೆದು ಮಿಂಚಿದರು. ಒಂದು ಟೆಸ್ಟ್ ಪಂದ್ಯದಲ್ಲಿ ಅದರಲ್ಲೂ 10 ಎಸೆತಗಳನ್ನಷ್ಟೇ ಎಸೆದಿರುವ ಶಾರ್ದೂಲ್ ಠಾಕೂರ್ ಕೂಡಾ ತಮ್ಮ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ವಿಕೆಟ್ ಪಡೆದು ಮಿಂಚಿದರು.

ಈ ಮಧ್ಯೆ ಸತತ ಗಾಯದ ಮೇಲೆ ಬರೆ ಎಳೆದಂತೆ ಪಂದ್ಯ ಆರಂಭವಾದ ಬಳಿಕವೂ ನವದೀಪ್ ಸೈನಿ ಗಾಯದ ತೊಂದರೆಗೆ ಸಿಲುಕಿರುವುದು ಭಾರತಕ್ಕೆ ಮಗದೊಂದು ಆಘಾತ ನೀಡಿದೆ. ಬೌಲಿಂಗ್ ವೇಳೆ ತೊಡೆಸಂದು ನೋವಿಗೊಳಗಾಗಿರುವ ನವದೀಪ್ ಸೈನಿ ಮೈದಾನ ತೊರೆದರು. ಇವರ ಗಾಯವನ್ನು ಬಿಸಿಸಿಐ ವೈದ್ಯಕೀಯ ತಂಡ ಪರಿಶೀಲಿಸುತ್ತಿದ್ದು, ಸ್ಕ್ಯಾನಿಂಗ್‌ಗಾಗಿ ರವಾನಿಸ ಲಾಗಿದೆ.