ಮುಂಬಯಿ: ಮುಂಬರುವ 10ನೇ ಆವೃತ್ತಿಯ ಟಿ20 ಮಹಿಳಾ ಬಿಗ್ ಬಾಸ್(WBBL 2024) ಲೀಗ್‌ಗೆ ಭಾರತದ 6 ಆಟಗಾರ್ತಿಯರು ವಿವಿಧ ತಂಡಗಳಿಗೆ ಆಯ್ಕೆಯಾಗಿದ್ದಾರೆ. ಆದರೆ, ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಉದಯೋನ್ಮುಖ ಆಟಗಾರ್ತಿ, ಕನ್ನಡತಿ ಶ್ರೇಯಾಂಕ ಪಾಟೀಲ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆಯ್ಕೆಯಾದ 6 ಆಟಗಾರ್ತಿಯರೆಂದರೆ, ಸ್ಮೃತಿ ಮಂಧನಾ (ಅಡಿಲೇಡ್ ಸ್ಟ್ರೈಕರ್), ಡಿ. ಹೇಮಲತಾ (ಪರ್ತ್ ಸ್ಕಾರ್ಚರ್), ಯಾಸ್ತಿಕಾ ಭಾಟಿಯಾ ಮತ್ತು ದೀಪ್ತಿ ಶರ್ಮ(ಮೆಲ್ಬರ್ನ್ ಸ್ಟಾರ್), ಶಿಖಾ ಪಾಂಡೆ ಮತ್ತು ಜೆಮಿಮಾ ರೋಡ್ರಿಗಸ್ (ಬ್ರಿಸ್ಬೇನ್). ಮಹಿಳಾ ಟಿ20 ವಿಶ್ವಕಪ್ ಬಳಿಕ ಅಕ್ಟೋಬರ್ 27ರಂದು ಟೂರ್ನಿಗೆ ಚಾಲನೆ ದೊರೆಯಲಿದೆ.
ಹರ್ಮಾನ್‌ಪ್ರೀತ್ ಕೌರ್ 2021ರ ಟೂರ್ನಿಯ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರೂ, ಈ ಬಾರಿಯ ಡ್ರಾಫ್ಟ್‌ನಲ್ಲಿ ಆಯ್ಕೆ ಮಾಡಲು ಫ್ರಾಂಚೈಸಿಗಳು ಬಿಡ್ ಸಲ್ಲಿಸಲಿಲ್ಲ. ಹೀಗಾಗಿ ಅವರಿಗೆ ಈ ಬಾರಿ ಅವಕಾಶ ಕೈತಪ್ಪಿದೆ. ಕೆರಿಬಿಯನ್ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಆಟಗಾರ್ತಿ ಎನಿಸಿದ್ದ ಶ್ರೇಯಾಂಕಾ ಪಾಟೀಲ್ ಸೇರ್ಪಡೆಗೂ ಯಾವ ತಂಡಗಳು ಆಸಕ್ತಿ ತೋರಲಿಲ್ಲ. ಶ್ರೇಯಾಂಕ ಸದ್ಯ ಕೈ ಬೆರಳಿನ ಗಾಯದಿಂದ ಚೇತರಿಕೆ ಕಾಣುತ್ತಿದ್ದಾರೆ. ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದರೂ ಕೂಡ ಫಿಟ್‌ನೆಸ್ ಆಧಾರದಲ್ಲಿ ಅಂತಿಮ ಆಯ್ಕೆಗೆ ಪರಿಗಣಿಸಲಾಗುತ್ತದೆ.
ವಿಕೆಟ್‌ಕೀಪರ್-ಬ್ಯಾಟರ್ ಯಾಸ್ತಿಕಾ ಭಾಟಿಯಾ ಅವರು ಮೆಲ್ಬೋರ್ನ್ ಸ್ಟಾರ್ಸ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಬಿಗ್ ಬಾಸ್ ಲೀಗ್‌ಗೆ ಪದಾರ್ಪಣೆ ಮಾಡಿದರು. ಭಾರತದ ಅನುಭವಿ ಆಲ್‌ರೌಂಡರ್ ಶಿಖಾ ಪಾಂಡೆ ಅವರನ್ನು ಬ್ರಿಸ್ಬೇನ್ ಹೀಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಕೆಳ ಕ್ರಮಾಂಕದ ಪ್ರಬಲ ಬ್ಯಾಟರ್ ಆಗಿರುವ ಶಿಖಾ ಸಾಕಷ್ಟು ಪಂದ್ಯಗಳಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜೆಮಿಮಾ ಮತ್ತು ಮಂಧನಾ ಕಳೆದ ಕೆಲ ಸರಣಿಗಳಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು.