Tuesday, 15th October 2024

ವನಿತೆಯರ ಏಕದಿನ ಬ್ಯಾಟಿಂಗ್‌ ರ‍್ಯಾಂಕಿಂಗ್‌: ಮಿಥಾಲಿ, ಲಿಜೆಲಿಗೆ ಜಂಟಿ ಅಗ್ರಸ್ಥಾನ

ದುಬೈ: ವನಿತೆಯರ ಏಕದಿನ ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್ ಅವರು ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಬ್ಯಾಟರ್‌ ಲಿಜೆಲಿ ಲೀ ಅವರು ಮಿಥಾಲಿ ಅವರೊಂದಿಗೆ ಜಂಟಿಯಾಗಿ ಮೊದಲ ಸ್ಥಾನಕ್ಕೇರಿದ್ದಾರೆ.

ವೆಸ್ಟ್ ಇಂಡೀಸ್‌ ಎದುರಿನ ಸರಣಿ ಮೊದಲ ಪಂದ್ಯದಲ್ಲಿ ಲಿಜೆಲಿ ಔಟಾಗದೆ 91 ರನ್‌ ಗಳಿಸಿದ್ದರು. ಇದು ಬಡ್ತಿಗೆ ಕಾರಣ ವಾಗಿದೆ. ಮಿಥಾಲಿ ಹಾಗೂ ಲೀ ಅವರ ಬಳಿ ಸದ್ಯ ತಲಾ 762 ರೇಟಿಂಗ್ ಪಾಯಿಂಟ್‌ಗಳಿವೆ. ಆಸ್ಟ್ರೇಲಿಯಾದ ಅಲಿಸಾ ಹೀಲಿ ಮೂರನೇ ಸ್ಥಾನ, ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಒಂಬತ್ತನೇ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ.

ಲೀ ಅವರು 2018ರ ಜೂನ್‌ನಲ್ಲಿ ಮೊದಲ ಬಾರಿ ಅಗ್ರಸ್ಥಾನದಲ್ಲಿದ್ದರು. ಭಾರತದ ಅನುಭವಿ ವೇಗಿ ಜೂಲನ್ ಗೋಸ್ವಾಮಿ ಮತ್ತು ಸ್ಪಿನ್ನರ್ ಪೂನಂ ಯಾದವ್ ಬೌಲರ್‌ಗಳಲ್ಲಿ ಕ್ರಮವಾಗಿ ಐದನೇ ಮತ್ತು ಒಂಬತ್ತನೇ ಸ್ಥಾನದಲ್ಲಿ ದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ದೀಪ್ತಿ ಶರ್ಮಾ ಐದನೇ ಸ್ಥಾನವನ್ನು ಕಾಯ್ದುಕೊಂಡಿ ದ್ದಾರೆ.

ಟಿ-20 ಕ್ರಮಾಂಕದಲ್ಲಿ ಭಾರತದ ಶೆಫಾಲಿ ವರ್ಮಾ 759 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನ ಹಾಗೂ ಆಸ್ಟ್ರೇಲಿಯಾದ ಬೆಥ್ ಮೂನಿ (744) ಮತ್ತು ಭಾರತ ಟಿ-20 ತಡಂಡದ ಉಪನಾಯಕಿ ಮಂದಾನ (716) ಅವರನ್ನು ಹಿಂದಿಕ್ಕಿದ್ದಾರೆ. ಟಿ20 ಬೌಲರ್‌ಗಳ ವಿಭಾಗದಲ್ಲಿ ದೀಪ್ತಿ (ಆರನೇ ಸ್ಥಾನ) ಮತ್ತು ಪೂನಂ (ಎಂಟನೇ) ಸ್ಥಾನಗಳಲ್ಲಿ ಬದಲಾವಣೆ ಆಗಿಲ್ಲ.