ಬ್ರಿಸ್ಬೇನ್: (WTC 2025 Final scenario)ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬನ್‌ನ ದಿ ಗಬ್ಬಾ ಸ್ಟೇಡಿಯಂನಲ್ಲಿ ಶನಿವಾರ ಆರಂಭವಾಗಿದೆ. ಆದರೆ, ಮಳೆಯ ಕಾರಣ ಮೊದಲನೇ ದಿನ ಕೇವಲ 13.2 ಓವರ್‌ಗಳನ್ನು ಮಾತ್ರ ಮುಗಿಸಲಾಗಿತ್ತು ಹಾಗೂ ಆಸ್ಟ್ರೇಲಿಯಾ ತಂಡ ವಿಕೆಟ್ ನಷ್ಟವಿಲ್ಲದೆ 28 ರನ್‌ಗಳನ್ನು ಗಳಿಸಿದೆ. ನೇಥನ್ ಮೆಕ್‌ಸ್ವೀನಿ ಹಾಗೂ ಉಸ್ಮಾನ್ ಖವಾಜ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಈ ಟೆಸ್ಟ್ ಪಂದ್ಯ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳಿಗೆ ಅತ್ಯಂತ ಪ್ರಮುಖವಾಗಿದೆ. ಅಂದ ಹಾಗೆ ಬ್ರಿಸ್ಬೇನ್‌ನಲ್ಲಿ ಮಳೆಯಾಗುತ್ತಿದ್ದು, ಮೂರನೇ ಟೆಸ್ಟ್ ಪಂದ್ಯ ಫಲಿತಾಂಶವಿಲ್ಲದೆ ಮಳೆಗೆ ಬಲಿಯಾಗುವ ಸಾಧ್ಯತೆ ಇದೆ. ಒಂದು ವೇಳೆ ಮೂರನೇ ಟೆಸ್ಟ್ ಪಂದ್ಯ ಮಳೆಗೆ ಬಲಿಯಾದರೆ, ಭಾರತ ತಂಡದ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಹಾದಿಯ ಲೆಕ್ಕಾಚಾರದ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
ಬ್ರಿಸ್ಬೇನ್ ಟೆಸ್ಟ್ ಪಂದ್ಯ ಮಳೆಗೆ ಬಲಿಯಾದರೆ ಭಾರತದ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಲೆಕ್ಕಾಚಾರ
ಕೊನೆಯ ಎರಡೂ ಪಂದ್ಯಗಳನ್ನು ಗೆಲ್ಲಬೇಕು
ಬ್ರಿಸ್ಬೇನ್ ಟೆಸ್ಟ್ ಪಂದ್ಯ ಮಳೆಗೆ ಬಲಿಯಾದರೆ ಅಥವಾ ಡ್ರಾನಲ್ಲಿ ಅಂತ್ಯ ಕಂಡರೆ, ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಟೆಸ್ಟ್ ಸರಣಿಯಲ್ಲಿ 1-1 ಸಮಬಲದಲ್ಲಿಯೇ ಮುಂದುವರಿಯಲಿವೆ. ಮೂರನೇ ಟೆಸ್ಟ್ ಡ್ರಾ ಅಥವಾ ಮಳೆಗೆ ಬಲಿಯಾದರೆ, ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಭಾರತ ತಂಡ ನೇರವಾಗಿ ಅರ್ಹತೆ ಪಡೆಯಬೇಕೆಂದರೆ, ಕೊನೆಯ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಗೆಲ್ಲಬೇಕಾಗುತ್ತದೆ. ಆ ಮೂಲಕ ಜೂನ್ ತಿಂಗಳಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಆಡಲಿದೆ.
ಭಾರತ 2-1 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದರೆ ಹೇಗೆ?
ಒಂದು ವೇಳೆ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಒಂದು ಗೆದ್ದು, ಇನ್ನೊಂದು ಟೆಸ್ಟ್ ಅನ್ನು ಡ್ರಾನಲ್ಲಿ ಮುಗಿಸಿ 2-1 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದರೆ ಭಾರತ ತಂಡದ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಭವಿಷ್ಯ, ಮುಂದಿನ ವರ್ಷ ಜನವರಿ ಮತ್ತು ಫೆಬ್ರವರಿಯಲ್ಲಿ ನಡೆಯುವ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ. ಈ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ ತಂಡ ಕನಿಷ್ಠ ಪಂದ್ಯವನ್ನು ಗೆಲ್ಲಬೇಕಾಗುತ್ತದೆ.
ಆಸ್ಟ್ರೇಲಿಯಾ ಒಂದು ಟೆಸ್ಟ್ ಗೆದ್ದರೆ ಹೇಗೆ?
ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಕನಿಷ್ಠ ಪಂದ್ಯವನ್ನು ಗೆದ್ದರೆ, ಆಗ ಭಾರತ ತಂಡದ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಭವಿಷ್ಯ ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಸರಣಿಯನ್ನು ಅವಲಂಬಿಸಬೇಕಾಗುತ್ತದೆ. ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಪಾಕ್ 2-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲಬೇಕು ಅಥವಾ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ 0-2 ಅಂತರದಲ್ಲಿ ಸೋಲಬೇಕಾಗುತ್ತದೆ.
ಬ್ರಿಸ್ಬೇನ್ ಹವಾಮಾನ ವರದಿ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನಕ್ಕೂ ಮಳೆ ಕಾಟ ನೀಡುವ ಸಾಧ್ಯತೆ ಇದೆ. ಎರಡನೇ ದಿನ ಶೇಕಡಾ 100 ರಷ್ಟು ಮಳೆ ಸುರಿಯಬಹುದು ಎಂದು ಸ್ಥಳೀಯ ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಪಂದ್ಯದ 3,4 ಮತ್ತು 5ನೇ ದಿನಗಳಲ್ಲಿಯೂ ಕ್ರಮವಾಗಿ 46%, 67% ಹಾಗೂ 68% ಮಳೆ ಬೀಳುವ ಅವಕಾಶವಿದೆ.
ಈ ಸುದ್ದಿಯನ್ನು ಓದಿ: WTC Final 2025: 3ನೇ ಸ್ಥಾನಕ್ಕೇರಿದ ಲಂಕಾ; ಫೈನಲ್‌ಗೆ ತೀವ್ರ ಪೈಪೋಟಿ